ದೇಶದ ಪೊಲೀಸ್ ಇಲಾಖೆಯಲ್ಲಿ ಇದೇ ಮೊದಲ ಬಾರಿಗೆ ತೃತೀಯಲಿಂಗಿ ಸಬ್ ಇನ್ಸ್ಪೆಕ್ಟರ್ ಆಗಿ ನೇಮಕ

Views: 119
ಬಿಹಾರ: ದೇಶದ ಪೊಲೀಸ್ ಇಲಾಖೆಯಲ್ಲಿ ಇದೇ ಮೊದಲ ಬಾರಿಗೆ ತೃತೀಯಲಿಂಗಿಯೊಬ್ಬರು ಸಬ್ ಇನ್ಸ್ಪೆಕ್ಟರ್ ಆಗಿ ನೇಮಕವಾಗಿದ್ದಾರೆ.
ಪೊಲೀಸ್ ನೇಮಕಾತಿ ಪರೀಕ್ಷೆಯ 1275 ಹುದ್ದೆಗಳ ಫಲಿತಾಂಶ ಪ್ರಕಟವಾಗಿದ್ದು, ಅದರಲ್ಲಿ ಮೂವರು ತೃತೀಯಲಿಂಗಿಗಳು ಆಯ್ಕೆಯಾಗಿದ್ದಾರೆ. ಭಾಗಲ್ಪುರದ ಹಳ್ಳಿಯೊಂದರ ನಿವಾಸಿ ಮಾನ್ವಿ ಮಧು ಕಶ್ಯಪ್ ಅವರು ತೇರ್ಗಡೆಯಾಗುವ ಮೂಲಕ ದೇಶದ ಮೊದಲ ತೃತೀಯಲಿಂಗಿ ಸಬ್ಇನ್ಸ್ಪೆಕ್ಟರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಕಳೆದ ಒಂದೂವರೆ ವರ್ಷಗಳಿಂದ ಪೊಲೀಸ್ ಹುದ್ದೆಗಾಗಿ ನಿತ್ಯ ಸುಮಾರು 8 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ಅಧ್ಯಯನ ನಡೆಸುತ್ತಿದ್ದೆ. ಮುಂಜಾನೆ ಕ್ರೀಡಾಂಗಣದಲ್ಲಿ ಒಂದೂವರೆ ಗಂಟೆಗಳ ಕಾಲ ದೈಹಿಕ ಕಸರತ್ತು ನಡೆಸುತ್ತಿದ್ದೆ. ಇದರ ಪರಿಣಾಮ ದೈಹಿಕ ಪರೀಕ್ಷೆಯಲ್ಲಿ 6 ನಿಮಿಷದ ಓಟವನ್ನು 4 ನಿಮಿಷ 34 ಸೆಕೆಂಡುಗಳಲ್ಲಿ ಮುಗಿಸಿದ್ದೆ. ಇದನ್ನು ಕಂಡು ಅಧಿಕಾರಿಗಳೇ ಅವಕ್ಕಾಗಿದ್ದರು ಎಂದು ಮಾನ್ವಿ ಹೇಳುತ್ತಾರೆ.
2022 ರಲ್ಲಿ ಕಾನ್ಸ್‌ಟೇಬಲ್ ಹುದ್ದೆಗೆ ಅರ್ಜಿ ಹಾಕಿದ್ದೆ. ಆದರೆ, ಅನಾರೋಗ್ಯ ಕಾರಣ ತಪ್ಪಿಸಿಕೊಂಡಿದ್ದೆ. ಆ ವೇಳೆ ನಾನು ಶಸ್ತ್ರಚಿಕಿತ್ಸೆಗೂ ಒಳಗಾದೆ. 6 ತಿಂಗಳ ಕಾಲ ವಿಶ್ರಾಂತಿಯಲ್ಲಿದ್ದೆ. ನಂತರ ಮತ್ತೆ ಪರೀಕ್ಷೆಯನ್ನು ತೆಗೆದುಕೊಳ್ಳಲು ಗುರು ರೆಹಮಾನ್ ಅವರ ಬಳಿ ಬಂದೆ. ಗುರು ರೆಹಮಾನ್ ಅವರು ಯಾವುದೇ ಶುಲ್ಕವಿಲ್ಲದೇ, ಅಧ್ಯಯನಕ್ಕೆ ಎಲ್ಲ ರೀತಿಯ ಸಾಮಗ್ರಿಗಳನ್ನು ಒದಗಿಸಿದರು. ಈ ಋಣ ನಾನು ಎಂದಿಗೂ ತೀರಿಸಲಾರೆ ಎಂದು ಸ್ಮರಿಸಿದರು.






