ರಾಜ್ಯ ಯುವ ಪ್ರಶಸ್ತಿಗೆ ಉಡುಪಿ ಜಿಲ್ಲೆ ಕುಂದಾಪುರದಿಂದ ಶಿಲ್ಪ ಕಲೆಗಾರ ಶ್ರೀತಿನ್ ಶೆಟ್ಟಿಗಾರ್ ಆಯ್ಕೆ

Views: 64
ಕುಂದಾಪುರ: ಪ್ರತಿ ವರ್ಷದಂತೆ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಹಾಗೂ ಚಿಕ್ಕಮಗಳೂರು ಜಿಲ್ಲಾ ಘಟಕದ ಸಂಯುಕ್ತ ಆಶಯದಲ್ಲಿ ನೀಡಲಾಗುವ ಪ್ರಶಸ್ತಿಗೆ ಉಡುಪಿ ಜಿಲ್ಲೆಯಿಂದ ಶಿಲ್ಪಕಲೆಗಾರ ಕುಂದಾಪುರ ತಾಲೂಕಿನ ಬಂಟ್ವಾಡಿಯ ಶ್ರೀತಿನ್ ಶೆಟ್ಟಿಗಾರ್ ಆಯ್ಕೆಯಾಗಿದ್ದಾರೆ.
ಡಿಸೆಂಬರ್ 30ರಂದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಅಂಬೇಡ್ಕರ್ ಭವನದಲ್ಲಿ 2023- 24ನೇ ಸಾಲಿನ ರಾಜ್ಯ ಯುವ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಸಾಮಾಜಿಕ ಕಾಳಜಿ, ಹಾಗೂ ನಿಸ್ವಾರ್ಥ ಗಣನೀಯ ಸೇವೆಯನ್ನು ಪರಿಗಣಿಸಿ ರಾಜ್ಯ ಯುವ ಪ್ರಶಸ್ತಿಗೆ ಶ್ರೀತಿನ್ ಶೆಟ್ಟಿಗಾರ್ ಆಯ್ಕೆಯಾಗಿರುತ್ತಾರೆ.
ಚಿತ್ರಕಲೆಯಲ್ಲಿ ಪ್ರಾಥಮಿಕ ಹಂತದ ತರಬೇತಿಯನ್ನು ಕುಂದಾಪುರದಲ್ಲಿ ಪಡೆದು, ನಂತರ ಕಾರ್ಕಳದಲ್ಲಿ ಕಲ್ಲು ಮತ್ತು ಮರದ ಸಾಂಪ್ರದಾಯಿಕ ಶಿಲ್ಪಕಲಾ ತರಬೇತಿ ಪಡೆದಿರುತ್ತಾರೆ. ಹಾಗೆಯೇ ಉನ್ನತ ಶಿಕ್ಷಣಕ್ಕಾಗಿ ಮೈಸೂರಿನ ಕಾವಾ ಕಾಲೇಜಿನಲ್ಲಿ ಐದು ವರ್ಷಗಳ ಬ್ಯಾಚುಲರ್ ಆಪ್ ಪೈನ್ ಆರ್ಟ್ ನಲ್ಲಿ ಶಿಲ್ಪಕಲೆಯ ತರಬೇತಿ ಪಡೆದಿರುತ್ತಾರೆ. ಇಲ್ಲಿ ಮುಖ್ಯವಾಗಿ ನೈಜ ಶಿಲ್ಪ ಕಲೆ ಮತ್ತು ಸಮಕಾಲಿನ ಶಿಲ್ಪಕಲೆಯ ತರಬೇತಿ ಪಡೆದಿದ್ದಾರೆ.
ಮಾರ್ಷಲ್ ಕಾರ್ಯಪ್ಪ ಕಂಚಿನ ಪ್ರತಿಮೆ, ರಮಣ ಮಹರ್ಷಿಯ ಪಂಚಲೋಹ ವಿಗ್ರಹ, ಕಲ್ಲಿನ ಪತಂಜಲಿ ಮುನಿ , ಪೈಬರ್ ಗ್ಲಾಸ್ ನ ಶಿವಾಜಿ ಪ್ರತಿಮೆ, ಕುಳಿತಿರುವ ಹನುಮಂತ ವಿಗ್ರಹ, ಧ್ಯಾನದಲ್ಲಿರುವ ಶಿವ, ದೇವಿ ಶಿಲ್ಪ, ಆನೆ, ಹುಲಿ, ಸಿಂಹ, ಹಾಗೂ ಇನ್ನಿತರ ಅನೇಕ ಶಿಲ್ಪ ಕೃತಿಗಳನ್ನು ರಚಿಸಿ ಎಲ್ಲರ ಮನಗೆದ್ದಿದ್ದರು.

ಇವರು ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ಪರಿಷ್ಕೃತಗೊಂಡ ಶಾಸ್ತ್ರೀಜಿಯವರ ಕಂಚಿನ ಪ್ರತಿಮೆ ಇಂದಿಗೂ ಕಂಗೊಳಿಸುತ್ತಿದೆ.






