ಯಾದಗಿರಿ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಕೋಣ ಬಲಿಕೊಡುವ ಜಾಗದಲ್ಲಿ ಕುಂಬಳಕಾಯಿ ಒಡೆದು ಶಾಂತಿಯುತ ದೇವಿ ಜಾತ್ರೆ ಆಚರಣೆ

Views: 1
ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಅನಿಷ್ಟ ಪದ್ಧತಿಯೊಂದು ಜೀವಂತವಾಗಿದ್ದು, ದೇವರಿಗೆ ಬಲಿ ಕೊಟ್ಟ ಕೋಣದ ಮಾಂಸ ತಿನ್ನದೇ ಇದ್ದರೆ ಬಹಿಷ್ಕಾರ ಹಾಕಲಾಗುತ್ತದೆ ಎಂಬ ವಿಚಾರ ಕಳೆದ ಎರಡು ದಿನದಿಂದ ಮುನ್ನೆಲೆಗೆ ಬಂದಿತ್ತು.
ಮಾದ್ಯಮದ ವರದಿಯಿಂದ ಯಾದಗಿರಿ ಜಿಲ್ಲಾಡಳಿತ ಎಚ್ಚೆತ್ತುಕೊಂಡು ದೇವಿಕೇರಾ ಗ್ರಾಮದಲ್ಲಿ ಪ್ರಾಣಿ ಬಲಿ ನಿಷೇಧಿಸಿ ಶಾಂತಿಯುತವಾಗಿ ದೇವಿ ಜಾತ್ರೆಯನ್ನು ಆಚರಣೆ ಮಾಡಿದೆ. ಕೋಣ ಬಲಿಕೊಡುವ ಜಾಗದಲ್ಲಿ ಕುಂಬಳಕಾಯಿ ಒಡೆದು ಮರೆಮ್ಮ, ಪಾಲ್ಕಮ್ಮ ಹಾಗೂ ದೇವಮ್ಮ ದೇವಿ ಜಾತ್ರೆಯನ್ನು ಆಚರಿಸಲಾಯಿತು. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಿಕೇರಾ ಗ್ರಾಮದಲ್ಲಿ ಜಾತ್ರೆ ಆಚರಣೆ ಮಾಡಿದ್ದು, ಜಾತ್ರೆ ಹಿನ್ನೆಲೆ ದೇವಿ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಕೆ ಮಾಡಲಾಯಿತು.
ನೂರಾರು ಮುತ್ತೈದೆಯರು ಮಡಿಯಿಂದ ತಮ್ಮತಮ್ಮ ಮನೆಗಳಿಂದ ದೀಪಗಳನ್ನ ತಲೆ ಮೇಲೆ ಇಟ್ಟುಕೊಂಡು ದೇವಸ್ಥಾನಕ್ಕೆ ಆಗಮಿಸಿ ದೀಪ ಬೆಳಗಿಸಿದರು. ಅಲ್ಲದೇ ಡೊಳ್ಳು ಕುಣಿತ ಹಾಗೂ ವಿವಿಧ ಕಲಾ ತಂಡಗಳು ಜಾತ್ರೆಗೆ ಮೆರಗು ತಂದವು. ರಾತ್ರಿಯಿಂದ ಬೆಳಗ್ಗಿನ ಜಾವದವರೆಗೂ ಜರುಗಿದ ಜಾತ್ರೆಯಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದರು. ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದ ಅನಿಷ್ಠ ಪದ್ಧತಿಗೆ ಯಾದಗಿರಿ ಜಿಲ್ಲಾಡಳಿತ ಮಂಗಳ ಹಾಡಿದೆ.
ದೇವಿಕೇರಾ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ ಗ್ರಾಮಸ್ಥರನ್ನು ಸುರಪುರ ತಹಶೀಲ್ದಾರ್ ವಿಜಯಕುಮಾರ್ ಮನವೊಲಿಸಿದ್ದಾರೆ. ಪ್ರಾಣಿ ಬಲಿ ನಿಷೇಧಕ್ಕಾಗಿ ಕಟ್ಟುನಿಟ್ಟಿನ ಮುಂಜಾಗೃತಾ ಕ್ರಮ ಕೈಗೊಂಡ ಹಿನ್ನೆಲೆ ದೇವಿಕೇರಾ ಗ್ರಾಮದಲ್ಲಿ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿತ್ತು.
ಶಾಂತಿಯುತ ಜಾತ್ರೆ ಆಚರಣೆಗಾಗಿ ಸುರಪುರ ತಹಶೀಲ್ದಾರ್ ರಾತ್ರಿ ಇಡೀ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದರು. ಈ ಪರಿಣಾಮ ಮರೆಮ್ಮ, ಪಾಲ್ಕಮ್ಮ ಹಾಗೂ ದೇವಮ್ಮ ದೇವರ ಜಾತ್ರೆ ಎರಡು ದಿನಗಳ ಕಾಲ ಶಾಂತಿಯುತವಾಗಿ ಜರುಗಿದೆ. ಇದಕ್ಕೂ ಮೊದಲು ಜಾತ್ರೆಯಲ್ಲಿ ಬಲಿ ಕೊಟ್ಟ ಕೋಣದ ಮಾಂಸ ದಲಿತರು ತಿನ್ನಬೇಕಿತ್ತು. ಹಾಗೇ ಕೋಣದ ಮಾಂಸ ತಿನ್ನದೇ ಇದ್ದರೆ ಬಹಿಷ್ಕಾರ ಹಾಕುವ ಬೆದರಿಕೆಯನ್ನೂ ಒಡ್ಡಲಾಗಿತ್ತು.






