ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಆತಂಕಕಾರಿ ಮಟ್ಟದಲ್ಲಿ ಏರಿಕೆ !
Views: 62
ಕನ್ನಡ ಕರಾವಳಿ ಸುದ್ದಿ: ರಾಜ್ಯದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಹೆಚ್ಚಾಗುತ್ತಿದ್ದು, ಕಳೆದ ವರ್ಷ (ನವೆಂಬರ್ ಅಂತ್ಯಕ್ಕೆ) 3,954 ಪ್ರಕರಣಗಳು ದಾಖಲಾಗಿವೆ.
ರಾಜ್ಯದಲ್ಲಿ ಪೋಕ್ಸೋ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಒಂದು ಕಡೆಯಾದರೆ, ಮತ್ತೊಂದೆಡೆ ತನಿಖಾ ಹಂತದಲ್ಲಿ ಸಾವಿರಾರು ಪ್ರಕರಣಗಳು ಬಾಕಿ ಉಳಿಯುತ್ತಿವೆ. 2025ನೇ ಸಾಲಿನಲ್ಲಿ ಒಟ್ಟು 807 ಪೋಕ್ಸೋ ಪ್ರಕರಣಗಳು ಇನ್ನೂ ತನಿಖಾ ಹಂತದಲ್ಲಿವೆ. ಇಷ್ಟು ದೊಡ್ಡ ಸಂಖ್ಯೆಯ ಪ್ರಕರಣಗಳ ಪೈಕಿ ಕೇವಲ 6 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ. 2024ರಲ್ಲಿ 62 ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದ್ದು, ಕೇವಲ 16 ಪ್ರಕರಣಗಳು ತನಿಖಾ ಹಂತದಲ್ಲಿವೆ. 2023ರಲ್ಲಿ 167 ಪ್ರಕರಣಗಳ ತನಿಖೆ ಪೂರ್ಣ ಗೊಂಡಿದ್ದು, ಕೇವಲ 4 ಪ್ರಕರಣಗಳು ತನಿಖಾ ಹಂತದಲ್ಲಿ ಬಾಕಿ ಉಳಿದಿವೆ. 2025ರಲ್ಲಿ 807 ಪ್ರಕರಣಗಳು ಇನ್ನೂ ಪೋಲೀಸ್ ತನಿಖೆಯ ಹಂತದಲ್ಲೇ ಇರುವುದು ಕಳವಳಕ್ಕೆ ಕಾರಣವಾಗಿದೆ.
ಪೋಕ್ಸೋ ಕಾಯಿದೆಯ ಪ್ರಕಾರ, ದೂರು ದಾಖಲಾದ 60 ದಿನಗಳ ಒಳಗಾಗಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಬೇಕು. ಆದರೆ 807 ಪ್ರಕರಣಗಳು ಬಾಕಿ ಇವೆ ಎಂದರೆ ಈ ಕಾನೂನುಬದ್ಧ ಕಾಲಮಿತಿಯ ಉಲ್ಲಂಘನೆಯಾಗುತ್ತಿದೆ ಎಂದರ್ಥ, ಪೊಲೀಸ್
ವಾರ್ಷಿಕವಾಗಿ ಪ್ರಕರಣಗಳ ಹೆಚ್ಚಳ
2022 ದಿಲ್ಲಿ ಒಟ್ಟು 3,211ದಾಖಲಾಗಿವೆ. ಇದರಲ್ಲಿ ಬೆಂಗಳೂರು ನಗರ 501, ತುಮಕೂರು 182 ಪ್ರಕರಣಗಳು ದಾಖಲಾಗುವ ಮೂಲಕ ಹೆಚ್ಚು ಪ್ರಕರಣಗಳು ಕಂಡು ಬಂದಿವೆ. 215 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು, 1,034 ಪ್ರಕರಣಗಳು ವಿಚಾರಣಾ ಹಂತದಲ್ಲಿವೆ. 2023 ರಲ್ಲಿ ಒಟ್ಟು 3,903. ಪ್ರಕರಣಗಳು ದಾಖಲಾಗಿದ್ದು, ಈ ವರ್ಷ 167 ಪ್ರಕರಣಗಳಲ್ಲಿ ಶಿಕ್ಷೆಯಾಗಿವೆ. 1,755 ಪ್ರಕರಣಗಳು ವಿಚಾರಣಾ ಹಂತದಲ್ಲಿವೆ. 2024 ರಲ್ಲಿ ಒಟ್ಟು 4,078 ಪ್ರಕರಣಗಳು ದಾಖಲಾಗಿವೆ. ಈ ವರ್ಷ ಕೇವಲ 62 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು, 2,747 ಪ್ರಕರಣಗಳು ಬಾಕಿ ಇವೆ. 2025ರ ನ.15ರವರೆಗೆ ಒಟ್ಟು 3,954 ಪ್ರಕರಣಗಳು ದಾಖಲಾಗಿದೆ. ಕೇವಲ 6 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು, 2,813 ಪ್ರಕರಣಗಳು ವಿಚಾರಣಾ ಹಂತದಲ್ಲಿದೆ.
ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ ಮತ್ತು ಒಂದೇ ಅಧಿಕಾರಿಗೆ ಹತ್ತಾರು ಪ್ರಕರಣಗಳ ಜವಾಬ್ದಾರಿ ನೀಡಿರುವುದು ತನಿಖೆಯ ವೇಗವನ್ನು ಕುಂಠಿತಗೊಳಿಸಿದೆ. ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ವೈಜ್ಞಾನಿಕ ಪುರಾವೆಗಳು ಬಹಳ ಮುಖ್ಯ. ವಿಧಿವಿಜ್ಞಾನ ಪ್ರಯೋಗಾಲಯಗಳಿಂದ ವರದಿ ಬರಲು ತಿಂಗಳುಗಟ್ಟಲೆ ಸಮಯ ಹಿಡಿಯುತ್ತಿರುವುದು ತನಿಖೆ ಬಾಕಿ ಉಳಿಯಲು ಮುಖ್ಯ ಕಾರಣ. ಕೆಲವು ಪ್ರಕರಣಗಳಲ್ಲಿ ಆರೋಪಿಗಳ ಪತ್ತೆ ಅಥವಾ ತಾಂತ್ರಿಕ ಸಾಕ್ಷ್ಯಗಳ ಸಂಗ್ರಹಣೆ ಸವಾಲಾಗಿ ಪರಿಣಮಿಸಿರುತ್ತದೆ.
ತನಿಖಾ ಸವಾಲುಗಳು: ಸರಕಾರವು ಅನೇಕ ಕಾನೂನುಗಳನ್ನು ತಂದಿದ್ದರೂ, ಅಪರಾಧಗಳು ಏರುತ್ತಲೇ ಇರುವುದಕ್ಕೆ ಮತ್ತು ಶಿಕ್ಷೆಯ ಪ್ರಮಾಣ ಕಡಿಮೆಯಿರುವುದಕ್ಕೆ ಕೆಲವು ಪ್ರಮುಖ ಕಾರಣಗಳಿವೆ. 2024ರಲ್ಲಿ 2,747 ಪ್ರಕರಣಗಳು ಮತ್ತು 2025 ರಲ್ಲಿ 2,813 ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇವೆ.
ವರ್ಷಗಳಿಂದ ನಡೆಯುವ ವಿಚಾರಣೆ ಸಂತ್ರಸ್ತ ಕುಟುಂಬಗಳ ತಾಳ್ಮೆ ಪರೀಕ್ಷಿಸಿದಂತಾಗಿದೆ. ದೌರ್ಜನ್ಯ ಎಸಗುವವರು ಹೆಚ್ಚಾಗಿ ಪರಿಚಯಸ್ಥರೇ ಆಗಿರುತ್ತಾರೆ.
ಸಾಮಾಜಿಕ ಒತ್ತಡ ಅಥವಾ ಭಯದಿಂದಾಗಿ ಸಾಕ್ಷಿಗಳು ನ್ಯಾಯಾಲಯದಲ್ಲಿ ಹೇಳಿಕೆ ಬದಲಿಸುವ ಸಾಧ್ಯತೆ ಹೆಚ್ಚು, ಕೇವಲ ಶೇ. 2-3 ಶಿಕ್ಷೆಯ ಪ್ರಮಾಣವು ಅಪರಾಧಿಗಳಲ್ಲಿ ಭಯವನ್ನು ಹುಟ್ಟಿಸಲು ವಿಫಲವಾಗುತ್ತಿದೆ.






