ನಾಳೆ ಭಾರತ್ ಬಂದ್‌ಗೆ ಕರೆ.. ಏನೇನಿರುತ್ತೆ? ಏನೇನಿರಲ್ಲ?… ಶಾಲಾ ಕಾಲೇಜುಗಳು ಇರುತ್ತಾ?

Views: 717
ಕನ್ನಡ ಕರಾವಳಿ ಸುದ್ದಿ: ನಾಳೆ (ಜುಲೈ 9, 2025) ಭಾರತ್ ಬಂದ್‌ಗೆ 10 ಸೆಂಟ್ರಲ್ ಟ್ರೇಡ್ ಯೂನಿಯನ್ ಗಳು ಕರೆ ನೀಡಿವೆ.
ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಭಾರತ್ ಬಂದ್‌ಗೆ ಕರೆ ನೀಡಲಾಗಿದೆ. ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿ, ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಭಾರತ್ ಬಂದ್‌ಗೆ ಕರೆ ನೀಡಲಾಗಿದೆ.
ಕೇಂದ್ರ ಸರ್ಕಾರವು ಕಾರ್ಪೋರೇಟ್ ಕಂಪನಿಗಳ ಪರವಾದ ನಿಲುವು ಹೊಂದಿದೆ ಎಂದು ಕಾರ್ಮಿಕ ಸಂಘಟನೆಗಳು ಆರೋಪಿಸಿವೆ. ರಾಷ್ಟ್ರ ವ್ಯಾಪಿ ಮುಷ್ಕರದಲ್ಲಿ ಬ್ಯಾಂಕಿಂಗ್, ಪೋಸ್ಟಲ್, ವಿಮಾ, ಕಲ್ಲಿದ್ದಲು ಗಣಿ ಕಾರ್ಮಿಕರು ಸೇರಿದಂತೆ 25 ಕೋಟಿ ಕಾರ್ಮಿಕರು ಭಾಗವಹಿಸುವ ನಿರೀಕ್ಷೆ ಇದೆ. ಔಪಚಾರಿಕ, ಅನೌಪಚಾರಿಯ ವಲಯದ ಕಾರ್ಮಿಕರು ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ. ಈ ಭಾರತ್ ಬಂದ್ ನಡೆಸಲು ಕಾರ್ಮಿಕ ಸಂಘಟನೆಗಳು ಕಳೆದ ಕೆಲ ತಿಂಗಳಿನಿಂದ ಭಾರಿ ಸಿದ್ಧತೆ ನಡೆಸಿವೆ. ರೈತರು, ಗ್ರಾಮೀಣಾ ಕಾರ್ಮಿಕರು ಕೂಡ ನಾಳೆಯ ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ಭಾಗಿಯಾಗುವರು ಎಂದು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಅಮರಜೀತ್ ಕೌರ್ ಹೇಳಿದ್ದಾರೆ.
ನಾಳೆಯ ಭಾರತ್ ಬಂದ್ ನಿಂದಾಗಿ ದೇಶದಲ್ಲಿ ಬ್ಯಾಂಕಿಂಗ್, ಪೋಸ್ಟಲ್, ವಿಮಾ ಸೇವೆ ಹಾಗೂ ಕಲ್ಲಿದ್ದಲು ಗಣಿ, ಕಾರ್ಖಾನೆ, ಟ್ರಾನ್ಸ್ ಪೋರ್ಟ್ ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹಿಂದ್ ಮಜ್ದೂರ್ ಸಭಾದ ಹರಭಜನ್ ಸಿಂಗ್ ಸಿಧು ಹೇಳಿದ್ದಾರೆ.
ಭಾರತ್ ಬಂದ್ ಸಂಘಟಕರ ಪ್ರಕಾರ, ನಾಳೆ ಬ್ಯಾಂಕಿಂಗ್ ಚಟುವಟಿಕೆಯಲ್ಲೂ ವ್ಯತ್ಯಯವಾಗಲಿದೆ. ನಾಳೆಯ ಬಂದ್‌ಗೆ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಉದ್ಯೋಗಿಗಳು ಹಾಗೂ ಕೋ ಅಪರೇಟೀವ್ ವಲಯದ ಬ್ಯಾಂಕ್ ಉದ್ಯೋಗಿಗಳು ಕೂಡ ಭಾಗಿಯಾಗುವರು. ಇದರಿಂದಾಗಿ ದೈನಂದಿನ ಬ್ಯಾಂಕಿಂಗ್ ಚಟುವಟಿಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬಂದ್ ಸಂಘಟಕರು ಹೇಳಿದ್ದಾರೆ. ಪ್ರತ್ಯೇಕವಾಗಿ ಬ್ಯಾಂಕಿಂಗ್ ಯೂನಿಯನ್ ಗಳು ನಾಳೆ ತಾವು ಭಾರತ್ ಬಂದ್ ನಲ್ಲಿ ಭಾಗಿಯಾಗುವುದನ್ನು ಖಚಿತಪಡಿಸಿಲ್ಲ.
ನಾಳೆ ದೇಶದಲ್ಲಿ ಶಾಲೆ, ಕಾಲೇಜು, ಯೂನಿರ್ವಸಿಟಿಗಳು ಓಪನ್ ಆಗಿರಲಿವೆ. ಶಾಲೆಗೆ ಮಕ್ಕಳನ್ನು ಕರೆದೊಯ್ಯುವ ಶಾಲಾ ಬಸ್ ಚಾಲಕರು ಮುಷ್ಕರದಲ್ಲಿ ಭಾಗಿಯಾದರೆ ಪೋಷಕರು ಮಕ್ಕಳನ್ನು ತಾವೇ ಕರೆದುಕೊಂಡು ಹೋಗಿ ಶಾಲೆಗೆ ಬಿಡಬೇಕಾಗುತ್ತೆ.
ನಾಳೆ ಸಾರ್ವಜನಿಕ ಸಾರಿಗೆ ಬಸ್ ಸೇವೆಯಲ್ಲೂ ವ್ಯತ್ಯಯವಾಗಬಹುದು. ಆ್ಯಪ್ ಆಧರಿತ ಟ್ಯಾಕ್ಸಿ, ಕ್ಯಾಬ್ ಸೇವೆ ಕೂಡ ವ್ಯತ್ಯಯವಾಗಬಹುದು. ಸಾರ್ವಜನಿಕ ಸಾರಿಗೆ ಸಿಬ್ಬಂದಿ, ಟ್ಯಾಕ್ಸಿ, ಕ್ಯಾಬ್ ಚಾಲಕರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗುವರು ಎಂದು ಭಾರತ್ ಬಂದ್ ಸಂಘಟಕರು ಹೇಳಿದ್ದಾರೆ.






