ಹುಲಿಕಲ್ ಘಾಟ್‌ನಲ್ಲಿ ದಿಢೀರ್ ಗುಡ್ಡ ಕುಸಿದು ಮೂವರು ಕಾರ್ಮಿಕರು ಸಾವು
Views: 315
ಕನ್ನಡ ಕರಾವಳಿ ಸುದ್ದಿ:ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಘಾಟ್‌ನಲ್ಲಿ ಗುರುವಾರ ಸಂಜೆ ಭೀಕರ ದುರಂತವೊಂದು ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಮತ್ತು ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ ದಿಢೀರ್ ಗುಡ್ಡ ಕುಸಿದು ಬಿದ್ದ ಪರಿಣಾಮ ಮೂವರು ಕಾರ್ಮಿಕರು ಮಣ್ಣಿನಡಿ ಸಿಲುಕಿ ಸಜೀವ ಸಮಾಧಿಯಾಗಿದ್ದಾರೆ.
ದುರಂತದಲ್ಲಿ ಮೃತಪಟ್ಟವರನ್ನು ರಾಘವೇಂದ್ರ (37), ರಾಜು (30) ಮತ್ತು ಶಬ್ಬೀರ್ (40) ಎಂದು ಗುರುತಿಸಲಾಗಿದೆ.
ಇವರೆಲ್ಲರೂ ಕಾಮಗಾರಿ ನಿರ್ವಹಿಸುತ್ತಿದ್ದ ಗುತ್ತಿಗೆ ಸಂಸ್ಥೆಯ ಕಾರ್ಮಿಕರಾಗಿದ್ದಾರೆ. ಘಟನೆಯಲ್ಲಿ ಸುಮಂತ ಮತ್ತು ಪರಮೇಶ್ ಸೇರಿದಂತೆ ನಾಲ್ವರು ಕಾರ್ಮಿಕರು ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಹೊಸನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕುಂದಾಪುರ-ಶಿವಮೊಗ್ಗವನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾದ ಹುಲಿಕಲ್ ಘಾಟ್‌ನಲ್ಲಿ ಕಳೆದ ಕೆಲವು ದಿನಗಳಿಂದ ರಸ್ತೆ ವಿಸ್ತರಣೆ ಮತ್ತು ಸುರಕ್ಷತಾ ತಡೆಗೋಡೆ ನಿರ್ಮಾಣದ ಕೆಲಸ ಪ್ರಗತಿಯಲ್ಲಿತ್ತು. ಗುರುವಾರ ಸಂಜೆ ಕಾರ್ಮಿಕರು ಎಂದಿನಂತೆ ಕೆಲಸದಲ್ಲಿ ನಿರತರಾಗಿದ್ದಾಗ, ಮೇಲ್ಭಾಗದಿಂದ ಭಾರಿ ಪ್ರಮಾಣದ ಮಣ್ಣು ಮತ್ತು ಕಲ್ಲುಗಳು ಕುಸಿದು ಬಿದ್ದಿವೆ. ಕೇವಲ ಸೆಕೆಂಡುಗಳ ಅಂತರದಲ್ಲಿ ಸಂಭವಿಸಿದ ಈ ಅವಘಡದಿಂದಾಗಿ ಕಾರ್ಮಿಕರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ.
ವಿಷಯ ತಿಳಿಯುತ್ತಿದ್ದಂತೆಯೇ ಹೊಸನಗರ ತಹಶೀಲ್ದಾರ್ ಭರತ್ ಹಾಗೂ ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಜೆಸಿಬಿ ಯಂತ್ರಗಳ ಸಹಾಯದಿಂದ ಸಮರೋಪಾದಿಯಲ್ಲಿ ಮಣ್ಣು ತೆರವುಗೊಳಿಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಸದ್ಯ ರಾತ್ರಿಯಾಗಿರುವುದರಿಂದ ಹಾಗೂ ಮಣ್ಣು ಸಡಿಲವಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಅಲ್ಪ ಅಡ್ಡಿಯುಂಟಾಗಿದ್ದು, ಬೆಳಕಿನ ವ್ಯವಸ್ಥೆ ಮಾಡಿಕೊಂಡು ಕಾರ್ಯಾಚರಣೆ ಮುಂದುವರಿಸಲಾಗಿದೆ.
ಘಟನೆಯಿಂದಾಗಿ ಕುಂದಾಪುರ-ಶಿವಮೊಗ್ಗ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಘಾಟ್‌ನ ಎರಡು ಬದಿಗಳಲ್ಲಿ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿವೆ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತವು ಭಾರಿ ವಾಹನಗಳ ಸಂಚಾರವನ್ನು ನಿರ್ಬಂಧಿಸಿದ್ದು, ಪ್ರಯಾಣಿಕರು ಆಗುಂಬೆ ಘಾಟ್ ಅಥವಾ ಕೊಲ್ಲೂರು ಮಾರ್ಗಗಳನ್ನು ಬಳಸುವಂತೆ ಸೂಚನೆ ನೀಡಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.






