ಮನೆ ಬಾಗಿಲಿಗೆ ಜಾತಿ ಪ್ರಮಾಣ ಪತ್ರ,ಶಾಶ್ವತ ನಿವಾಸ ಪ್ರಮಾಣಪತ್ರ ವಿತರಣೆಗೆ ಚಾಲನೆ ನೀಡಿದ ಸಿಎಂ
Views: 39
ಕನ್ನಡ ಕರಾವಳಿ ಸುದ್ದಿ: ದೇಶದ ಕಾನೂನು, ನಿಯಮಗಳ ಪ್ರಕಾರ ಶಾಶ್ವತ ನಿವಾಸ ಪ್ರಮಾಣಪತ್ರ ನೀಡುತ್ತಿದ್ದೇವೆ. ಕರ್ನಾಟಕ ರಾಜ್ಯದಲ್ಲಿ ಬದುಕು ಕಟ್ಟಿಕೊಳ್ಳುವವರಿಗೆ ಹಕ್ಕು ಮಂಡಿಸಲು ಇದು ಮೊದಲ ಹೆಜ್ಜೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿಂದು ರಾಜ್ಯದ ಸುಮಾರು 5 ಕೋಟಿ ಜನರಿಗೆ ಮನೆ ಮನೆಗೆ ತೆರಳಿ ಈಗಾಗಲೇ ಮಾನ್ಯವಾಗಿರುವ ಜಾತಿ ಪ್ರಮಾಣಪತ್ರಗಳ ವಿತರಣೆ ಹಾಗೂ ಶಾಶ್ವತ ನಿವಾಸಿ ಪ್ರಮಾಣಪತ್ರ (Permanent Resident Certificates) ನೀಡುವ ವೆಬ್ಸೈಟ್ ಅನಾವರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಹಿಂದೆ ನಾವು ಭೂ ಸುಧಾರಣೆ ಕಾಯ್ದೆ ಹಿಡಿದು ಪಹಣಿ ಕೊಡುವ ಹೆಜ್ಜೆ ಇಟ್ಟಿದ್ದೆವು. ಸಿಎಂ ಆದ ಮೇಲೆ ನಾನು ನಿಮ್ಮ ಮತ ನಮ್ಮ ಹಕ್ಕು. ನಿಮ್ಮ ಮತ ನಿಮ್ಮ ಬದುಕು. ನಿಮ್ಮ ಮತ ಹಾಗೂ ಬದುಕಿಗೆ ನಮ್ಮ ಸರ್ಕಾರ ಗ್ಯಾರಂಟಿ ಎಂಬ ಮಾತನ್ನು ಪದೇ ಪದೆ ಹೇಳುತ್ತಿದ್ದೇನೆ. ದೇಶದಲ್ಲೇ ಮೊದಲ ಬಾರಿಗೆ ಶಾಶ್ವತ ನಿವಾಸ ಪ್ರಮಾಣ ಪತ್ರವನ್ಮು ಉಚಿತವಾಗಿ ಮನೆ ಮನೆ ತಲುಪಿಸಲು ಮುಂದಾಗಿದ್ದೇವೆ ಎಂದರು.
ಎಸ್ಐಆರ್ಗೆ ಅನುಕೂಲವಾಗಲು, ಮತದಾನದ ಹಕ್ಕು ಉಳಿಸಲು ಪಕ್ಷ ಬೇಧ ಮರೆತು ನೆರವಾಗಲು ಈ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯದ 4.85 ಕೋಟಿ ಜನರಿಗೆ ಜಾತಿ ಪ್ರಮಾಣ ಪತ್ರವನ್ನು ಕೊಡುವುದು ಇಡೀ ದೇಶದಲ್ಲೇ ಪ್ರಥಮವಾಗಿದೆ. ಶಾಶ್ವತ ನಿವಾಸ ಪ್ರಮಾಣ ಪತ್ರವನ್ನು ಅವರ ಮನೆ ಬಾಗಿಲಿಗೆ ಕೊಡಲು ಮುಂದಾಗಿದ್ದೇವೆ. ಇಂತಹ ನಿರ್ಧಾರವನ್ನು ಯಾವ ಸರ್ಕಾರಗಳೂ ಮಾಡಿಲ್ಲ. ಕೆಲವರಿಗೆ ನಾವು ಅಧಿಕಾರವನ್ನು ದುರುಪಯೋಗ ಮಾಡುತ್ತೇವೆ ಎಂಬ ಗಾಬರಿ ಇರಬಹುದು. ಆದರೆ, ಸಾರ್ವಜನಿಕರಿಗೆ ಸಹಾಯ ಮಾಡಲು ಇದನ್ನು ಮಾಡಲಾಗಿದೆ. ಸರ್ಕಾರ ತನ್ನ ಜವಾಬ್ದಾರಿಯಿಂದ ದೂರ ಹೋಗಬಾರದು ಎಂಬ ನಿಟ್ಟಿನಲ್ಲಿ ಈ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.
ಪಿಆರ್ಸಿ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು. ಮತದಾನದ ಹಕ್ಕು ಇರಲೇಬೇಕು ಎಂಬ ಉದ್ದೇಶದಿಂದ ಸರ್ಕಾರ ಜಾತಿ ಪ್ರಮಾಣ ಪತ್ರ ಹಾಗೂ ಪಿಆರ್ಸಿಯನ್ನು ಮನೆ ಮನೆಗೆ ತಲುಪಿಸುತ್ತಿದ್ದೇವೆ. ನಮಗೆ ರಾಜಕಾರಣ ಮುಖ್ಯವಲ್ಲ. ಜನರ ಬದುಕು, ಗುರುತು ಮುಖ್ಯ. ಎಲ್ಲಿ ಗುರುತು ಇದೆಯೋ ಅಲ್ಲಿ ಬದುಕು ಇದೆ. ಬಿಎಲ್ಒಗಳು ಮನೆ ಬಾಗಿಲಿಗೆ ಗಣತಿ ನಮೂನೆಯನ್ನು ಕೊಡುತ್ತಾರೆ. ಅದನ್ನು ಭರ್ತಿ ಮಾಡಿ ಸಹಿ ಹಾಕಿ ಬಿಎಲ್ಒಗಳಿಗೆ ಕೊಡಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಕಳೆದುಕೊಂಡವರು ಸರ್ಕಾರಿ ಸೌಲಭ್ಯ ಕಳೆದುಕೊಳ್ಳಲಿದ್ದಾರೆ ಎಂದು ಹೇಳಿದರು.
ಇದು ಆಡಳಿತ ವ್ಯವಸ್ಥೆಯಲ್ಲಿ ಸರ್ಕಾರದ ಐತಿಹಾಸಿಕ ಹೆಜ್ಜೆಯಾಗಿದೆ. ನಾಗರಿಕರ ಧ್ವನಿ, ರಕ್ಷಣೆಯ ಕ್ರಮ ವಹಿಸುತ್ತಿದ್ದೇವೆ. ಸರ್ಕಾರ ಮತ್ತು ಜನರ ಮಧ್ಯೆ ಅಂತರ ಕಡಿಮೆ ಮಾಡಲು, ಜನರ ಬದುಕು ಉಳಿಸಿಕೊಳ್ಳಲು, ಮತದಾನದ ಹಕ್ಕು ಉಳಿಸಲು ಈ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.
ಜಾತಿ ಪ್ರಮಾಣ ಪತ್ರ ಪಡೆಯುವ ವಿಧಾನ: ಜಾತಿ ಪ್ರಮಾಣಪತ್ರಗಳ ವಿತರಣಾ ಪ್ರಕ್ರಿಯೆಯು 20 ಜುಲೈ 2026ರಿಂದ ಆರಂಭವಾಗಲಿದ್ದು, 4 ವಿಧಾನಗಳ ಮೂಲಕ ಸಾರ್ವಜನಿಕರನ್ನು ತಲುಪಲಿದೆ.
ಮನೆ ಮನೆಗೆ ವಿತರಣೆ: ಒಟ್ಟು 4.85 ಕೋಟಿ ಡಿಜಿಟಲ್ ಜಾತಿ ಪ್ರಮಾಣ ಪತ್ರಗಳನ್ನು ಗ್ರಾಮವಾರು ವಿಂಗಡಿಸಿ PDF ರೂಪದಲ್ಲಿ ಜಿಲ್ಲಾಧಿಕಾರಿಗಳಿಗೆ ಒದಗಿಸಲಾಗಿದೆ. ಈ ಪ್ರತಿಗಳನ್ನು ಮುದ್ರಿಸಿ ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಪ್ರಮಾಣ ಪತ್ರ ವಿತರಿಸಿದ ಬಳಿಕ, ವಿತರಕರು ಮೊಬೈಲ್ ಸಂಖ್ಯೆಯನ್ನು ದಾಖಲಿಸಿ. ಆ್ಯಪ್ ಮೂಲಕ ಒಟ್ಟು ವಿತರಣೆಯ ವಿವರಗಳನ್ನು ದಾಖಲಿಸುತ್ತಾರೆ.
ವೆಬ್‌ಸೈಟ್ ಮೂಲಕ ಉಚಿತ ಡೌನ್‌ಲೋಡ್: ಸಾರ್ವಜನಿಕರು ತಮ್ಮ ಜಾತಿ ಪ್ರಮಾಣ ಪತ್ರವನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಲು ವಿಶೇಷ ವೆಬ್ಸೈಟ್ ಅಭಿವೃದ್ಧಿಪಡಿಸಲಾಗಿದೆ. ಆರ್.ಡಿ.ಸಂಖ್ಯೆ, ರೇಷನ್ ಕಾರ್ಡ್ ನಂ., ಆಧಾರ್ ಸಂಖ್ಯೆಯನ್ನು ನಮೂದಿಸಿ ಜಾತಿ ಪ್ರಮಾಣಪತ್ರ ಪಡೆಯಬಹುದು. ವೆಬ್ಸೈಟ್ ಲಿಂಕ್: https://nadakacheri.karnataka.gov.in/AJSKCertificates
ಹೋಬಳಿ ಮಟ್ಟದಲ್ಲಿ ಸಹಾಯ ಕೇಂದ್ರಗಳು: ಜಾತಿ ಪ್ರಮಾಣ ಪತ್ರವನ್ನು ಸಾರ್ವಜನಿಕರು ಸುಲಭವಾಗಿ ಡೌನ್‌ಲೋಡ್ ಮಾಡಿಕೊಂಡು ಮುದ್ರಿಸಿಕೊಳ್ಳಲು ಪ್ರತಿ ಹೋಬಳಿ ಮಟ್ಟದಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಕೇಂದ್ರಗಳಲ್ಲಿ ಜಾತಿ ಪ್ರಮಾಣ ಪತ್ರ ದಾಖಲೆಗಳ ಮುದ್ರಣವನ್ನು ಸಾರ್ವಜನಿಕರಿಗೆ ಸಂಪೂರ್ಣ ಉಚಿತವಾಗಿ ಒದಗಿಸಲಾಗುವುದು.
ವಾಟ್ಸ್ಆ್ಯಪ್/ಎಸ್ಎಂಎಸ್ ಮೂಲಕ ಮಾಹಿತಿ: ಸುಮಾರು 85 ಲಕ್ಷ ಜಾತಿ ಪ್ರಮಾಣ ಪತ್ರಗಳನ್ನು ಈಗಾಗಲೇ ಮೊಬೈಲ್ ಸಂಖ್ಯೆಗಳೊಂದಿಗೆ ಲಿಂಕ್ ಮಾಡಲಾಗಿದ್ದು, ಸಂಬಂಧಿತ ಫಲಾನುಭವಿಗಳಿಗೆ WhatsApp ಅಥವಾ SMS ಮೂಲಕ ಡೌನ್‌ಲೋಡ್ ಲಿಂಕ್ ಕಳುಹಿಸಲಾಗಿದೆ. ಇದರ ಮೂಲಕ ಅವರು ತಮ್ಮ ಜಾತಿ ಪ್ರಮಾಣ ಪತ್ರಗಳನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಶಾಶ್ವತ ನಿವಾಸ ಪ್ರಮಾಣ ಪತ್ರದ ಸೇವೆಯನ್ನು ಸರ್ಕಾರವು ಆದ್ಯತೆಯ ಮೇರೆ ಆರಂಭಿಸಿರುತ್ತದೆ. ಸಾರ್ವಜನಿಕರು ಅವಶ್ಯಕತೆಗೆ ತಕ್ಕಂತೆ ಶಾಶ್ವತ ಪ್ರಮಾಣ ಪತ್ರ ಪಡೆಯಲು ಹತ್ತಿರದ ಅರ್ಜಿಯನ್ನು ನಾಡಕಚೇರಿಯಲ್ಲಿ ಅಥವಾ ಆನ್ಲೈನ್ ಮುಖಾಂತರ ಸಲ್ಲಿಸಬಹುದಾಗಿದೆ. ಅದರ ಲಿಂಕ್ ಹೀಗಿದೆ: https://ajsk.karnataka.gov.in






