ರಾಜ್ಯದಲ್ಲಿ 44.84 ಲಕ್ಷ ಮತದಾರರ ಹಕ್ಕಿಗೆ ಕುತ್ತು?
ಶಾಶ್ವತವಾಗಿ ಸ್ಥಳಾಂತರಗೊಂಡವರು 26,32,229, ಮೃತರ ಸಂಖ್ಯೆ 9,81,642
Views: 32
ಕನ್ನಡ ಕರಾವಳಿ ಸುದ್ದಿ: ರಾಜ್ಯದ ಮತದಾರರ ಪಟ್ಟಿಯನ್ನು ಅತ್ಯಂತ ನಿಖರ, ಪಾರದರ್ಶಕ ಮತ್ತು ದೋಷರಹಿತವಾಗಿಸಲು ಕೈಗೊಂಡಿರುವ ಅಭಿಯಾನವು ಮುಂದುವರಿದಿದ್ದು, ಮನೆ ಬದಲಿಸಿದ್ದರೂ ಮತದಾರರ ಪಟ್ಟಿಯಲ್ಲಿ ವಿಳಾಸ ಬದಲಿಸದೇ ಇರುವ ಸುಮಾರು 44.84 ಲಕ್ಷ ಮತದಾರರ ಗಣತಿ ನಮೂನೆಗಳನ್ನು ‘ಪತ್ತೆಯಾಗದ ಮತದಾರ’ ಅಥವಾ ‘ಶಾಶ್ವತವಾಗಿ ಸ್ಥಳಾಂತರವಾದ ಮತದಾರ’, ನಕಲು, ಸತ್ತವರು ಮತ್ತು ಇತರರು ವರ್ಗದಡಿಯಲ್ಲಿ ಬರುವಂತೆ ಗುರುತಿಸಲು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯು ತೀರ್ಮಾನಿಸಿದೆ.
ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯ ಮುಖ್ಯ ಚುನಾ ವಣಾಧಿಕಾರಿ ಕಚೇರಿಯು ಈ ಕ್ರಮ ಕೈಗೊಂಡಿದೆ. ಮತದಾರರ ಪಟ್ಟಿಯಲ್ಲಿ ಹೆಸರುಗಳಿದ್ದರೂ, ವಾಸ್ತವದಲ್ಲಿ ಆ ಮತದಾರರು ಅಲ್ಲಿಲ್ಲದಿರುವುದು ಪ್ರಜಾಪ್ರಭುತ್ವದ ಹಕ್ಕಿನ ಮೌಲ್ಯವನ್ನು ಕುಂದಿಸುತ್ತದೆ. ಈ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾಧಿಕಾರಿ ಕಚೇರಿಯು 44,84,331 ಮತದಾರರನ್ನು ಎಂದು ಎಎಸ್‌ಡಿಡಿಒ ವರ್ಗದಡಿ ಗುರುತಿಸಿದೆ.
ಶಾಶ್ವತವಾಗಿ ಸ್ಥಳಾಂತರಗೊಂಡವರು 26,32,229 (ಅತಿ ಹೆಚ್ಚು ಸಂಖ್ಯೆಯ ಮತದಾರರು ಬೇರೆ ಊರುಗಳಿಗೆ ಸ್ಥಳಾಂತರ ಗೊಂಡಿದ್ದಾರೆ) ಮಂದಿ ಇದ್ದು, 9,81,642 ಮೃತಪಟ್ಟವರಿದ್ದಾರೆ. ಇವರನ್ನು ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲಾಗುತ್ತದೆ. 5,87,457 ಗೈರು ಹಾಜರಿರಾಗಿದ್ದು, 2,70,659 ನಕಲು ಮತದಾರರು
ಡಿಜಿಟಲೀಕರಣದ ಪ್ರಗತಿ: ರಾಜ್ಯದ ಡಿಜಿಟಲೀಕರಣದ ಒಟ್ಟಾರೆ ಸಾಧನೆ ಶೇ.66.35ರಷ್ಟಿದೆ. ಹಾವೇರಿ, ಚಿಕ್ಕಬಳ್ಳಾ ಪುರ, ಉತ್ತರ ಕನ್ನಡ ಮತ್ತು ಹಾಸನ ಜಿಲ್ಲೆಗಳು ಡಿಜಿಟಲೀಕರಣದಲ್ಲಿ ಶೇ.80ರ ಮೈಲಿ ಗಲ್ಲನ್ನು ದಾಟಿವೆ. ಬೆಂಗಳೂರು ಸೇರಿದಂತೆ ಇತರೆ ನಗರ ಪ್ರದೇಶಗಳಲ್ಲಿ ಡಿಜಿಟಲೀಕರಣದ ವೇಗವನ್ನು ಹೆಚ್ಚಿಸಬೇಕಿದೆ. ಕಳೆದ 23 ದಿನಗಳಲ್ಲಿ 5.5 ಕೋಟಿ ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಈ ಪೈಕಿ 3.5 ಕೋಟಿ ನಮೂನೆಗಳು ಈಗಾಗಲೇ ಡಿಜಿಟಲೀಕರಣಗೊಂಡಿವೆ. ಮುಂದಿನ 17 ದಿನಗಳಲ್ಲಿ ಉಳಿದಿರುವ 1.5 ಕೋಟಿ ನಮೂನೆಗಳನ್ನು ಪೂರ್ಣಗೊಳಿಸಬೇಕಾದ ಸವಾಲು ಆಯೋಗದ ಮುಂದಿದೆ. ಮಾಹಿತಿ ನೀಡಲು ನಿರಾಕರಿಸಿದವರು ಅಥವಾ ದಾಖಲಾತಿ ತೊಂದರೆ ಇರುವವರು 12,344 ಇದ್ದಾರೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.






