ಕನ್ನಡ ಕರಾವಳಿ: ಕಳೆದ 42 ವರ್ಷಗಳಿಂದ ವಿವಿಧ 16 ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಕುಂದಾಪುರ ತಾಲೂಕಿನ ಕೋಟೇಶ್ವರದ ನಿವಾಸಿ, ಖ್ಯಾತ ವಾಸ್ತುತಜ್ಞ ಡಾ. ಕೆ. ಬಸವರಾಜ್ ಶೆಟ್ಟಿಗಾರ್ ಅವರು 2026-27ನೇ ಸಾಲಿನ ಪ್ರತಿಷ್ಠಿತ “ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ”ಗೆ ಭಾಜನರಾಗಿದ್ದಾರೆ. ಈ ವಿಷಯವನ್ನು ಆರ್ಯಭಟ ಕಲ್ಬರಲ್ ಆರ್ಗನೈಸೇಶನ್ (ರಿ.) ಇದರ ಅಧ್ಯಕ್ಷರಾದ ಡಾ. ಎಚ್.ಎಲ್.ಎನ್. ರಾವ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಪ್ರತಿಮ ಸಾಧನೆಯ ಹಾದಿ: ಡಾ. ಬಸವರಾಜ್ ಶೆಟ್ಟಿಗಾರ್ ಅವರು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗದೆ, ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾರೆ:
ಯಕ್ಷಗಾನ ಮತ್ತು ಸಾಹಿತ್ಯ: ಇವರು 74 ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದು, 19 ನಾಟಕಗಳನ್ನು ಬರೆದಿದ್ದಾರೆ (ಇದರಲ್ಲಿ 2 ನಾಟಕಗಳಿಗೆ ಜಿಲ್ಲಾ ಪ್ರಶಸ್ತಿ ಸಂದಿದೆ). ಜೊತೆಗೆ 4 ಕಾದಂಬರಿಗಳು ಹಾಗೂ ನೂರಾರು ಭಕ್ತಿಗೀತೆ, ಭಾವಗೀತೆ ಮತ್ತು ಕಥೆಗಳನ್ನು ರಚಿಸಿದ್ದಾರೆ.
ಕಲೆ ಮತ್ತು ಮಾಧ್ಯಮ: ಚಿತ್ರನಟರಾಗಿ, ನಾಟಕ ಕಲಾವಿದರಾಗಿ, ನಿರ್ದೇಶಕರಾಗಿ ಹಾಗೂ ಆಕಾಶವಾಣಿ ಮತ್ತು ಟಿವಿ ಮಾಧ್ಯಮಗಳಲ್ಲಿ ಚಿಂತಕರಾಗಿ ಕಾರ್ಯನಿರ್ವಹಿಸಿದ್ದಾರೆ. 51 ಕ್ಷೇತ್ರಗಳ ಅಧ್ಯಯನ ಮಾಡಿ ’51 ಕ್ಷೇತ್ರ ಮಹಾತ್ಮ’ ಎಂಬ ಯಕ್ಷಗಾನ ಪ್ರಸಂಗ ಬರೆದು ವಿಶ್ವದಾಖಲೆ ನಿರ್ಮಿಸಿದ್ದಾರೆ.
ಕ್ಷೇತ್ರ ಮಹಾತ್ಮೆಗಳ ಸರದಾರ: ಕಲಾವಿದರಾಗಿ, ನಿರ್ದೇಶಕರಾಗಿ ಹಾಗೂ ಆಕಾಶವಾಣಿ ಮತ್ತು ಟಿವಿ ಮಾಧ್ಯಮಗಳಲ್ಲಿ ಚಿಂತಕರಾಗಿ ಕಾರ್ಯನಿರ್ವಹಿಸಿದ್ದಾರೆ. 51 ಕ್ಷೇತ್ರಗಳ ಅಧ್ಯಯನ ಮಾಡಿ ’51 ಕ್ಷೇತ್ರ ಮಹಾತ್ಮೆ’ ಎಂಬ ಯಕ್ಷಗಾನ ಪ್ರಸಂಗ ಬರೆದು ವಿಶ್ವದಾಖಲೆ ನಿರ್ಮಿಸಿದ್ದಾರೆ.
ವಾಸ್ತು ಮತ್ತು ಜ್ಯೋತಿಷ್ಯ: ಕಳೆದ 25 ವರ್ಷಗಳಿಂದ ಜ್ಯೋತಿಷ್ಯ ಮತ್ತು ವಾಸ್ತುಶಾಸ್ತ್ರದಲ್ಲಿ ಪಾಂಡಿತ್ಯ ಹೊಂದಿರುವ ಇವರು, 1 ಲಕ್ಷಕ್ಕೂ ಅಧಿಕ ಮನೆಗಳ ವಾಸ್ತು ವಿನ್ಯಾಸ ಹಾಗೂ ಲಕ್ಷಾಂತರ ಜಾತಕ ಪರಿಶೀಲನೆ ನಡೆಸಿದ್ದಾರೆ.
ಸಂಘಟನೆ: 22ಕ್ಕೂ ಹೆಚ್ಚು ಸಂಘ-ಸಂಸ್ಥೆಗಳನ್ನು ಸ್ಥಾಪಿಸಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಗೌರವ ಮತ್ತು ಬಿರುದುಗಳು:ಇವರ ಸುದೀರ್ಘ ಸೇವೆಯನ್ನು ಗುರುತಿಸಿ ಈಗಾಗಲೇ ಅನೇಕ ಗೌರವಗಳು ಲಭಿಸಿವೆ:
ಪ್ರಮುಖ ಪ್ರಶಸ್ತಿಗಳು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಡಾ. ಶಿವರಾಮ ಕಾರಂತ ರಾಜ್ಯ ಪ್ರಶಸ್ತಿ, ಬಸವ ರತ್ನ ರಾಷ್ಟ್ರ ಪ್ರಶಸ್ತಿ, ಕರುನಾಡ ರತ್ನ, ಮತ್ತು ಭಾರತ ರತ್ನ ಅಬ್ದುಲ್ ಕಲಾಂ ರಾಷ್ಟ್ರ ಪ್ರಶಸ್ತಿ ಸೇರಿದಂತೆ ಹಲವು ಅಂತರಾಷ್ಟ್ರೀಯ ಗೌರವಗಳು.
ಬಿರುದುಗಳು: “ಮೌಲ್ಯಧಾರಿತ ಕಥಾನಕಗಳ ಸರದಾರ”, “ಸಮಾಜ ರತ್ನ”, “ಧರ್ಮಧುರಂಧರ”, “ಜ್ಯೋತಿಷ್ಯ ಚೂಡಾಮಣಿ” ಮುಂತಾದ ಅನೇಕ ಬಿರುದುಗಳಿಂದ ಇವರು ಪುರಸ್ಕೃತರಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭ: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮೇ 23 ರಂದು ನಡೆಯಲಿರುವ ಅದ್ದೂರಿ ಸಮಾರಂಭದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಡಾ. ಕೆ. ಬಸವರಾಜ್ ಶೆಟ್ಟಿಗಾರ್ ಅವರಿಗೆ ಈ “ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ”ಯನ್ನು ನೀಡಿ ಗೌರವಿಸಲಾಗುವುದು.