‘ಉಷ್ಣಅಲೆ’ ನಿರೀಕ್ಷೆ, ಏಪ್ರಿಲ್ 20ರ ತನಕ ವ್ಯಾಪಕ ಮಳೆ ಮುನ್ಸೂಚನೆ
Views: 28
ಕನ್ನಡ ಕರಾವಳಿ ಸುದ್ದಿ: ರಾಜ್ಯದ ಗರಿಷ್ಠ ತಾಪಮಾನ ಏರಿಕೆ ಆಗುತ್ತಿದ್ದು, ಎಲ್ಲೆಡೆ ‘ಉಷ್ಣಅಲೆ’ ನಿರೀಕ್ಷೆ ಇದೆ. ಈಗಾಗಲೇ ಕರಾವಳಿ ಸೇರಿ ಕೆಲವು ಜಿಲ್ಲೆಗಳಿಗೆ ಉಷ್ಣ ಅಲೆ ಹಿನ್ನೆಲೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಮುಂದಿನ ಒಂದು ವಾರ (ಏಪ್ರಿಲ್ 20) ರಾಜ್ಯದಲ್ಲಿ ಬಿಸಿಲು ಮತ್ತು ಮಳೆ ಮಿಶ್ರಿತ ವಾತಾವರಣ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಮಳೆ ಮತ್ತೆ ಅಬ್ಬರಿಸಲಿದೆ. ಪ್ರತ್ಯೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣವಾಗಿ ಸುರಿಯಲಿದ್ದು, ಒಣಹವೆ ಮೇಲುಗೈ ಸಾಧಿಸಲಿದೆ. ಉತ್ತರ ಕರ್ನಾಟಕ, ಕರಾವಳಿ ಹಾಗೂ ಕೆಲವು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಒಂದು ವಾರ ಮಳೆ ಬರಲಿದೆ. ಮಾತ್ರವಲ್ಲದೇ ಕಳೆದ ಎರಡು ದಿನಗಳಲ್ಲಿ ರಾಜ್ಯ ವಿವಿಧೆಡೆ ಗರಿಷ್ಠ ತಾಪಮಾನದಲ್ಲಿ ಸುಮಾರು 1-3 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿದ್ದು. ಇದೇ ಸ್ಥಿತಿ ರಾಜ್ಯದಲ್ಲಿ ಮುಂದುವರಿಯಲಿದೆ ಎಂದು ಐಎಂಡಿ ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಕರಾವಳಿಯ ಉಡುಪಿ, ಉತ್ತರ ಕನ್ನಡದಲ್ಲಿ ಮುಂದಿನ ಏಪ್ರಿಲ್ 15ರವರೆಗೆ ಎರಡು ದಿನ ಅತ್ಯಧಿಕ ಬಿಸಿಲು ಕಂಡು ಬರಲಿದೆ. ಗರಿಷ್ಠ ತಾಪಮಾನ ಏರಿಕೆ ಆಗಲಿದ್ದು, ದಕ್ಷಿಣ ಕನ್ನಡ ಜಿಲ್ಲೆ ಒಳಗೊಂಡಂತೆ ಮೂರು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಮಳೆಯು ಆಗಲಿದೆ. ನಂತರ ಏಪ್ರಿಲ್ 20ರವರೆಗೆ ಕರಾವಳಿಯಲ್ಲಿ ಮತ್ತೆ ಮಳೆ ತೀವ್ರ ಹೆಚ್ಚಾಗುವ ಸಾಧ್ಯತೆ ಇದ್ದು, ವ್ಯಾಪಕ ಮಳೆ ನಿರೀಕ್ಷೆ ಇದೆ.






