ಶರಣಾಗತಿ ವೇಳೆ ನಕ್ಸಲ್ ತೊಂಬಟ್ಟು ಲಕ್ಷ್ಮೀ ಹೇಳಿದ್ದೇನು?

Views: 372
ಕನ್ನಡ ಕರಾವಳಿ ಸುದ್ದಿ: ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮಚ್ಚಟ್ಟು ತೊಂಬಟ್ಟು ಗ್ರಾಮದ ನಕ್ಸಲ್ ಮಹಿಳೆ ಲಕ್ಷ್ಮೀ ಉಡುಪಿಯಲ್ಲಿ ರವಿವಾರ (ಫೆ.02) ಶರಣಾಗುವ ಮೂಲಕ ಮುಖ್ಯ ವಾಹಿನಿಗೆ ಬಂದಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಪ್ರಕ್ರಿಯೆ ನಡೆಸಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಶರಣಾಗಿದ್ದಾರೆ. ಎಸ್ ಪಿ ಡಾ.ಕೆ ಅರುಣ್, ಹೆಚ್ಚುವರಿ ಎಸ್ಪಿ ಎಸ್ ಟಿ ಸಿದ್ದಲಿಂಗಪ್ಪ ಸಮ್ಮುಖದಲ್ಲಿ ತೊಂಬಟ್ಟು ಲಕ್ಷ್ಮೀ ಶರಣಾಗತಿ ಪ್ರಕ್ರಿಯೆ ನಡೆಯಿತು.
ಪೊಲೀಸ್ ಭದ್ರತೆಯೊಂದಿಗೆ ಎಸ್ಪಿ ಕಚೇರಿಗೆ ಆಗಮಿಸಿದ ಲಕ್ಷ್ಮೀ ಜೊತೆ ಆಕೆಯ ಸಹೋದರ ವಿಠಲ ಪೂಜಾರಿ ಹಾಗೂ ಸಂಬಂಧಿಕರಿದ್ದರು. ನಕ್ಸಲ್ ಶರಣಾಗತಿ ಹಾಗೂ ಪುನರ್ವಸತಿ ಸಮಿತಿಯ ಸದಸ್ಯ ಶ್ರೀಪಾಲ ಈ ವೇಳೆ ಹಾಜರಿದ್ದರು.
ಲಕ್ಷ್ಮೀ ಹಿನ್ನೆಲೆ ಏನು?
ಕುಂದಾಪುರ ತಾಲೂಕಿನ ಮಚ್ಚಟ್ಟು ಗ್ರಾಮದ ತೊಂಬಟ್ಟು ಇರ್ಕಿಗದ್ದೆಯ ನಿವಾಸಿ ಪಂಜು ಪೂಜಾರಿ – ದಾರಕ್ಕ ದಂಪತಿಯ 5ನೇ ಪುತ್ರಿ. ಸಹೋದರರಾದ ರಾಮ್, ರಾಜು, ವಿಠಲ, ಬಸವ ಕೃಷಿಕರಾಗಿದ್ದಾರೆ. ತಂಗಿ ರಾಜೀವಿಯ ವಿವಾಹವಾಗಿದೆ. ತಂದೆ 5 ವರ್ಷಗಳ ಹಿಂದೆ ಹಾಗೂ ತಾಯಿ 3 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ.
ಗಿರಿಜನರಿಗೆ ಕಾಡುತ್ಪತ್ತಿ ಸಂಗ್ರಹಿಸಲು ಅಡ್ಡಿಪಡಿ ಸುತ್ತಾರೆ ಎಂದು ದೂರಿ 2008ರ ನ.3ರಂದು ರಾತ್ರಿ 9ಕ್ಕೆ ಶಂಕರನಾರಾಯಣ ಠಾಣೆ ವ್ಯಾಪ್ತಿಯ ಹಂಜ ಎಂಬಲ್ಲಿ ನಾರಾಯಣ ನಾಯ್ಕ್ ಅವರ ಮನೆಗೆ ಬಂದೂಕು ಸಹಿತ ಪ್ರವೇಶಿಸಿ ಕೊಲೆ ಬೆದರಿಕೆ ಒಡ್ಡಿದ ಪ್ರಕರಣದ ಆರೋಪವೂ ಈಕೆಯ ಮೇಲಿದೆ.
ಲಕ್ಷ್ಮೀ 2006ರಲ್ಲಿ ವಾರಾಹಿ, ಕರಾವಳಿ ದಳದಲ್ಲಿ ಗುರುತಿಸಿಕೊಂಡಿದ್ದಳು ಎಂದು ಪೊಲೀಸ್ ಡಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. 7ನೇತರಗತಿ ತನಕ ಓದಿದ್ದಾಳೆ. ತನ್ನಗ್ರಾಮದ – ರಸ್ತೆ ಸಮಸ್ಯೆ, ಸಾರಾಯಿ ಅಂಗಡಿ ವಿರುದ್ಧ ಹೋರಾಟಗಳಲ್ಲಿ ಭಾಗಿಯಾಗಿ ಸಾಮಾಜಿಕವಾಗಿ ಗುರುತಿಸಿಕೊಂಡಿದ್ದಳು. ಈಕೆ ನಕ್ಸಲ್ ಗುಂಪಿನಲ್ಲಿ ಕ್ರಾಂತಿಕಾರಿ ಗೀತೆಗಳನ್ನು ಹಾಡುತ್ತ ಚುರುಕಾಗಿದ್ದಳು.
ಲಕ್ಷ್ಮೀ ಬೇಡಿಕೆಯೇನು?
ಶರಣಾಗತಿ ಪ್ರಕ್ರಿಯೆ ವೇಳೆ ಮಾತನಾಡಿದ ಲಕ್ಷ್ಮಿ, ನಕ್ಸಲ್ ಶರಣಾಗತಿ ಬಗ್ಗೆ ಟಿವಿಗಳಲ್ಲಿ ಸುದ್ದಿ ನೋಡಿ ತಿಳಿದುಕೊಂಡೆ. ಸಿದ್ದರಾಮಯ್ಯನವರು ಒಂದು ಅವಕಾಶ ಕೊಟ್ಟಿದ್ದಾರೆ. ಅದರಂತೆ ಶರಣಾಗಿದ್ದೇನೆ. ಸದ್ಯ ಸ್ವಇಚ್ಛೆಯಿಂದ ಸರ್ಕಾರದ ಮುಂದೆ ಶರಣಾಗಿದ್ದೇನೆಯೇ ಹೊರತು, ನನ್ನ ಮೇಲೆ ಯಾರೂ ಒತ್ತಡ ಹೇರಿಲ್ಲ ಎಂದರು. ನನಗೆ ಸಿದ್ದರಾಮಯ್ಯನವರು ಸಹಾಯ ಮಾಡಬೇಕು. ನಮ್ಮೂರಿಗೆ ರಸ್ತೆ, ನೀರು, ಶಾಲೆ, ಆಸ್ಪತ್ರೆ ಇಲ್ಲ. ಅದನ್ನು ಮಾಡಿಕೊಡಬೇಕು ಎಂದು ಹೇಳಿದರು.
ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಮಾತನಾಡಿ, ರಾಜ್ಯ ಸರ್ಕಾರದ ಆದೇಶದಂತೆ ಶರಣಾಗತಿ ಪ್ಯಾಕೇಜ್ ನೀಡಲಾಗುತ್ತೆ. ಮೂರು ಕೆಟಗರಿಯಲ್ಲಿ ನಕ್ಸಲ್ರಿಗೆ ಶರಣಾಗತಿ ಪ್ಯಾಕೇಜ್ ಇದೆ. ನಮ್ಮ ರಾಜ್ಯದ ನಿವಾಸಿಗಳಾಗಿದ್ದರೆ ಎ ಕೆಟಗರಿ ಪ್ಯಾಕೇಜ್ ನೀಡಲಾಗುತ್ತದೆ. ಎ ಕೆಟಗರಿಗೆ ಬರುತ್ತಾರೆ ಎಂಬುದನ್ನು ಗಮನಿಸಿ ಶಿಫಾರಸು ಮಾಡಿದ್ದೇವೆ. ಪುನರ್ವಸತಿ ಹಾಗೂ ತರಬೇತಿ ವಿದ್ಯಾಭ್ಯಾಸಕ್ಕೂ ಅವಕಾಶ ಇದೆ. ಲಕ್ಷ್ಮೀ ಹೇಳಿರುವ ಊರಿನ ಸಮಸ್ಯೆಗಳ ಬಗ್ಗೆ ಗಮನಹರಿಸಲಾಗುವುದು ಎಂದು ಭರವಸೆ ನೀಡಿದರು.