ರಾಜಕೀಯ

ಉಪ ಚುನಾವಣೆ ಹೀನಾಯ ಸೋಲಿನ ಬೆನ್ನಲ್ಲೇ ಬಿಜೆಪಿ ನಾಯಕರ ತಲೆದಂಡ!

Views: 155

ಕನ್ನಡ ಕರಾವಳಿ ಸುದ್ದಿ: ಮೂರು ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಿದೆ. ಈ ಸೋಲಿನ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬಿಜೆಪಿ, ತಲೆದಂಡಕ್ಕೆ ಮುಂದಾಗಿದೆ.ಬಿಜೆಪಿಯಲ್ಲಿನ ಬಣ ರಾಜಕೀಯದಿಂದಾಗಿ ಬಿಜೆಪಿಗೆ ಇದೀಗ ಭಾರೀ ಹಿನ್ನಡೆಯಾಗಿದೆ. ರಾಜ್ಯದ ಮೂರು ವಿಧಾನಸಭೆ ಚುನಾವಣೆಗಳ ಪೈಕಿ ಒಂದೇ ಒಂದು ಕ್ಷೇತ್ರದಲ್ಲೂ ಗೆಲ್ಲುವುದಕ್ಕೆ ಬಿಜೆಪಿ – ಜೆಡಿಎಸ್ ಮೈತ್ರಿ ಪಕ್ಷಗಳಿಂದ ಸಾಧ್ಯವಾಗಿಲ್ಲ.

ಇದೀಗ ಮೂರು ಕ್ಷೇತ್ರಗಳಲ್ಲಿ ಸೋತ ಬೆನ್ನಲ್ಲೇ ಬಿಜೆಪಿಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದವರಿಗೆ ಬಿಸಿ ಮುಟ್ಟಿಸಲು ಬಿಜೆಪಿ ಹೈಕಮಾಂಡ್ ಹಾಗೂ ಬಿಜೆಪಿ ರಾಜ್ಯ ಘಟಕ ಮುಂದಾಗಿದೆ. ಈ ಬಾರಿ ಶಿಗ್ಗಾವಿಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರ ಮಗ ಭರತ್‌ ಬೊಮ್ಮಾಯಿ ಅವರು ಗೆಲ್ಲಲಿದ್ದಾರೆ ಎಂದೇ ನಿರೀಕ್ಷೆ ಮಾಡಲಾಗಿತ್ತು. ಆದರೆ, ಇಲ್ಲಿ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯಾಸಿರ್ ಅಹ್ಮದ್‌ ಪಠಾಣ್ ಅವರು ಚುನಾವಣೆಯಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಚನ್ನಪಟ್ಟಣದಲ್ಲೂ ಲೆಕ್ಕಾಚಾರಗಳು ಏರುಪೇರಾಗಿದ್ದು, ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಅವರು ಮೂರನೇ ಬಾರಿ ಹೀನಾಯ ಸೋಲು ಕಂಡಿದ್ದಾರೆ.

ಶಿಗ್ಗಾಂವಿ ವಿಧಾನಸಭಾ ಉಪ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಇದೀಗ ಬಿಜೆಪಿ ತಲೆದಂಡಕ್ಕೆ ಮುಂದಾಗಿದೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ಚಟುವಟಿಕೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದ ಶ್ರೀಕಾಂತ ದುಂಡಿಗೌಡರ ಹಾಗೂ ಬಿಜೆಪಿ ಮುಖಂಡ ಸಂಗಮೇಶ ಕಂಬಾಳಿಮಠ ಎನ್ನುವ ನಾಯಕರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

6 ವರ್ಷಗಳ ಕಾಲ ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿದೆ. ಶ್ರೀಕಾಂತ ದುಂಡಿಗೌಡರ ಶಿಗ್ಗಾವಿ ಉಪಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕೊನೆಯ ಗಳಿಗೆಯಲ್ಲಿ ಹಿರಿಯ ನಾಯಕರ ಒತ್ತಾಯದ ಮೂಲಕ ಹಿಂದೆ ಸರಿದಿದ್ದರು.‌ಆದರೆ ಬಿಜೆಪಿ ಟಿಕೆಟ್ ಭರತ್ ಬೊಮ್ಮಾಯಿಗೆ ಸಿಕ್ಕ ಮೇಲೆ ಉಪಚುನಾವಣೆಯಲ್ಲಿ ಪಕ್ಷ ವಿರೋದಿ ಚಟುವಟಿಕೆ ನಡೆಸಿದ್ದರು ಎನ್ನುವ ಆರೋಪ ಅವರ ಮೇಲೆ ಕೇಳಿ ಬಂದಿತ್ತು.

ರಾಜ್ಯ ಬಿಜೆಪಿ ಶಿಸ್ತು ಸಮಿತಿ ‌ಅಧ್ಯಕ್ಷ ಲಿಂಗರಾಜ್ ಪಾಟೀಲ್ ಆದೇಶದ ಮೇರಗೆ ಶ್ರೀಕಾಂತ್ ದುಂಡಿಗೌಡ ಉಚ್ಚಾಟನೆ ಮಾಡಿ ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ್ ಪೂಜಾರ ಆದೇಶ ಹೊರಡಿಸಿದ್ದಾರೆ. ಈ ರೀತಿ ಕ್ರಮ ತೆಗೆದುಕೊಳ್ಳುತ್ತಿರುವುದು ಬಿಜೆಪಿಯ ಕೆಲವು ನಾಯಕರಲ್ಲಿ ಆತಂಕ ಸೃಷ್ಟಿಸಿದೆ ಎನ್ನಲಾಗಿದೆ. ಇನ್ನು ಈಚೆಗಷ್ಟೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಬಿಜೆಪಿಯಲ್ಲಿನ ಭಿನ್ನಮತಿಯರಿಗೆ ಎಚ್ಚರಿಕೆಯ ಸಂದೇಶವನ್ನು ಕೊಟ್ಟಿದ್ದರು.

 

 

 

 

Related Articles

Back to top button