ಹೊಸಂಗಡಿಯಲ್ಲಿ ವರದಕ್ಷಿಣೆ ಕಿರುಕುಳ:ಪತಿಯ ಮನೆಯೊಳಗೆ ಪ್ರವೇಶಿಸದಂತೆ ಪತ್ನಿಗೆ ಹಲ್ಲೆ, ದೂರು
Views: 64
ಕನ್ನಡ ಕರಾವಳಿ ಸುದ್ದಿ: ಪತಿ ಹಾಗೂ ಪತಿ ಮನೆಯವರು ವರದಕ್ಷಿಣೆಗಾಗಿ ಕಿರುಕುಳ ನೀಡಿ, ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ ಬಗ್ಗೆ ಪ್ರಕರಣ ದಾಖಲಾಗಿದೆ.
ಹೊಸಂಗಡಿಯ ಪ್ರವ್ಯಾ (25) ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರವ್ಯಾ ಅವರ ಮದುವೆಯು ಪ್ರಸಾದ್ ಕುಮಾರ್ ಶೆಟ್ಟಿ ಅವರೊಂದಿಗೆ ಮೇ 8ರಂದು ಕುಂದಾಪುರದಲ್ಲಿ ಜರುಗಿತ್ತು. ಮದುವೆಗಿಂತ ಮುನ್ನ ಆರೋಪಿ ಪತಿ ಪ್ರಸಾದ್ ಕುಮಾರ್ ಶೆಟ್ಟಿ ರಘುರಾಮ ಶೆಟ್ಟಿ ಶಶಿಕಲಾ, ಪವನ್ ಕುಮಾರ್ ಶೆಟ್ಟಿ ಪ್ರಸನ್ನ ಸೇರಿಕೊಂಡು ಹೊಸಂಗಡಿಯ ಮನೆಗೆ ಬಂದು 5 ಲಕ್ಷ ರೂ. ವರದಕ್ಷಿಣೆ ಹಾಗೂ 30 ಪವನ್ ಚಿನ್ನದ ಬೇಡಿಕೆ ಇಟ್ಟಿದ್ದರು. ಪ್ರವ್ಯಾ ಅವರ ಮನೆಯವರು 2.5 ಲಕ್ಷ ರೂ.ಹಾಗೂ 30 ಪವನ್ ಚಿನ್ನ ನೀಡಿ, ಸಂಪೂರ್ಣ ಖರ್ಚು ಬರಿಸಿ ಮದುವೆ ಮಾಡಿಸಿಕೊಟ್ಟಿದ್ದರು.
ಪತಿಯು ತಾನು ವಾಸವಿದ್ದ ಬೆಳಗಾವಿಗೆ ಕರೆದುಕೊಂಡು ನಿರಂತರವಾಗಿ ಊಟ ತಿಂಡಿ ಸರಿಯಾಗಿ ನೀಡದೆ ಉಳಿದ 2.5 ಲಕ್ಷ ರೂ.ವರದಕ್ಷಿಣೆ ತರುವಂತೆ ಹಿಂಸಿಸಿದರು.
ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ ಪ್ರವ್ಯಾ ಅವರ ಸಂಬಳವನ್ನು ತನ್ನ ಖಾತೆಗೆ ಹಾಕುವಂತೆ ಪತಿ ಹಿಂಸೆ ನೀಡುತ್ತಿದ್ದರು. ಇದರ ಬಗ್ಗೆ ನ. 24 ರಂದು ಬೆಳಗಾವಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಕರೆಸಿ ವಿಚಾರಣೆ ನಡೆಸಿ ಬುದ್ದಿವಾದ ಹೇಳಿ ಕಳುಹಿಸಿದ್ದರು. ಪತಿಯ ಮನೆಗೆ ಪೋಷಕರ ಜತೆಗೆ ಹೋದಾಗ ಮನೆಯೊಳಗೆ ಪ್ರವೇಶಿಸದಂತೆ ತಡೆದು ಪತಿ ಹಾಗೂ ಮನೆಯವರು ಹಲ್ಲೆ ನಡೆಸಿದರು ಎಂದು ಪ್ರವ್ಯಾ ಪೊಲೀಸರಿಗೆ ದೂರು ನೀಡಿದ್ದಾರೆ. ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






