ರಾಜಕೀಯ

ಹೆಚ್‌ಡಿಕೆಗೆ ‘ಕರಿಯಣ್ಣ’ ಎಂದ ಜಮೀರ್ ಅಹ್ಮದ್  ಕ್ಷಮೆಯಾಚನೆ! 

Views: 68

ಕನ್ನಡ ಕರಾವಳಿ ಸುದ್ದಿ: ನಾನು ಮತ್ತು ಕುಮಾರಸ್ವಾಮಿ ಅವರು ಎಷ್ಟು ಆತ್ಮೀಯರು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. 24 ಗಂಟೆಯಲ್ಲಿ 16 ಗಂಟೆ ಇಬ್ಬರು ಜೊತೆಯಲಿರುತ್ತಿದ್ದೆವು. ಆಗ ಅವರು ಪ್ರೀತಿಯಿಂದ ನನಗೆ ಕುಳ್ಳ ಅನ್ನುತ್ತಿದ್ದರು, ನಾನು ಅವರಿಗೆ ಕರಿಯಣ್ಣ ಎನ್ನುತ್ತಿದ್ದೆ. ಕರಿಯಣ್ಣ ಎಂದು ಬಹಳಷ್ಟು ಬಾರಿ ಕರೆದಿದ್ದೇನೆ. ಚುನಾವಣೆ ಹಿನ್ನೆಲೆ ವಿವಾದ ಸೃಷ್ಟಿಯಾಗಿದೆ ಅಷ್ಟೇ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಸಚಿವ ಜಮೀರ್‌ ಅಹ್ಮದ್‌ ತಿಳಿಸಿದರು.

ನಗರದಲ್ಲಿಂದು ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಕುಟುಂಬವನ್ನು ಕೊಂಡುಕೊಳ್ಳುತ್ತೇನೆ ಎಂದು ಹೇಳಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ”ಯಾರಾದರು ದೇವೇಗೌಡರ ಕುಟುಂಬವನ್ನು ಕೊಂಡುಕೊಳ್ಳಲು ಸಾಧ್ಯವೇ?. ನನಗೆ ದೇವೇಗೌಡರ ಮೇಲೆ ಬಹಳ ಗೌರವವಿದೆ. ಈ ಹಿಂದೆ ಚುನಾವಣೆಯಲ್ಲಿ ಮುಸ್ಲಿಂ ಮತಗಳನ್ನು ಖರೀದಿ ಮಾಡುತ್ತೇನೆ ಎಂದಿದ್ದರು. ಆ ವಿಚಾರವನ್ನು ಉಲ್ಲೇಖಿಸಿ ನಾನು ಹೇಳಿದ್ದೇನೆ” ಎಂದು ಸ್ಪಷ್ಟಪಡಿಸಿದರು.

ನ.19 ರಂದು ವಕ್ಫ್ ಬೋರ್ಡ್ ಚುನಾವಣೆ ಇದೆ. ಈ ಹಿನ್ನೆಲೆ ಇಂದು ಸಭೆ ಕರೆದಿದ್ದೇವೆ. ಮತದಾರರು ಮಾತ್ರ ಭಾಗಿಯಾಗಿದ್ದಾರೆ. ವಕ್ಫ್ ಜಮೀನಿನ ವಿವಾದ ಇಲ್ಲಿ ಚರ್ಚೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಬಸ್‌ ಮಾಲೀಕ, ಡ್ರೈವರ್‌ ಅಲ್ಲ: ಬಸ್‌ ಡ್ರೈವರ್ನನ್ನು ಕರೆದುಕೊಂಡು ಬಂದು ಎಂಎಲ್ಎ ಮಾಡಿದವರು ದೇವೇಗೌಡರು ಎಂಬ ನಾಗಮಂಗಲದ ಮಾಜಿ ಶಾಸಕ ಸುರೇಶ್‌ ಗೌಡ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಬಸ್‌ ಡ್ರೈವರ್‌ ಅಲ್ಲ, ಬಸ್‌ ಮಾಲೀಕ. ನಮ್ಮ ತಾತನ ಕಾಲದಿಂದಲೂ ನಾವು ಬಸ್‌ ಮಾಲೀಕರು. ಕುಮಾರ ಸ್ವಾಮಿಯನ್ನು ಸಿಎಂ ಮಾಡಲು, ರಾಜ್ಯಪಾಲರ ಬಳಿ ಎಂಎಲ್ಎಗಳನ್ನು ಕರೆದುಕೊಂಡು ಹೋಗುವಾಗ ನಾನು ಬಸ್‌ ಡ್ರೈವರ್‌ ಆಗಿದ್ದೆ ಅಷ್ಟೇ ಎಂದು ಹೇಳಿದರು.

Related Articles

Back to top button
error: Content is protected !!