ಸಾಮಾಜಿಕ

ಹನಿಮೂನ್ ಅರ್ಧದಲ್ಲಿಯೇ ವಾಪಸಾಗಿ ಸಾವಿಗೆ ಶರಣಾಗಿದ್ದ ಗಾನವಿ ಪತಿಯೂ ಆತ್ಮಹತ್ಯೆಗೆ ಶರಣು

Views: 29

ಕನ್ನಡ ಕರಾವಳಿ ಸುದ್ದಿ: ಹನಿಮೂನ್ ಅರ್ಧದಲ್ಲಿಯೇ ವಾಪಸಾಗಿ, ಸಾವಿಗೆ ಶರಣಾಗಿದ್ದ ಗಾನವಿ ಪ್ರಕರಣದಲ್ಲಿ ಮತ್ತೊಂದು ತಿರುವು ಸಿಕ್ಕಿದ್ದು ಪತ್ನಿಯ ರೀತಿಯಲ್ಲಿಯೇ ಪತಿ ಸೂರಜ್ ಸಹ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಗಾನವಿ ಕುಟುಂಬ ಸದಸ್ಯರು ಸೂರಜ್ ಮನೆಯವರ ವಿರುದ್ಧ ವರದಕ್ಷಣೆ ಕಿರುಕುಳದ ದೂರು ದಾಖಲಿಸಿದ್ದರು. ಪತಿ ಹಾಗೂ ಪೋಷಕರನ್ನು ಬಂಧಿಸಬೇಕು ಎಂದು ಪ್ರತಿಭಟನೆಯನ್ನು ನಡೆಸಿದ್ದರು. ಆದರೀಗ ಸೂರಜ್ ನಾಗ್ಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ತಾಯಿಯೂ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎನ್ನುವ ಮಾಹಿತಿ ದೊರೆಕಿದೆ.

26 ವರ್ಷ ಗಾನವಿ ಅವರು, ರಾಮಮೂರ್ತಿ ನಗರ ದಲ್ಲಿರುವ ಪೋಷಕರ ಮನೆಯಲ್ಲಿ ಡಿ.24ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಅಸ್ವಸ್ಥರಾಗಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಮಿದುಳು ನಿಷ್ಕ್ರಿಯಗೊಂಡಿತ್ತು. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಕೊನೆಯುಸಿರು ಎಳೆದಿದ್ದರು. ಗಾನವಿ ಆತ್ಮಹತ್ಯೆಗೆ ಯತ್ನಿಸಿದ ದಿನವೇ, ಸೂರಜ್ ಹಾಗೂ ಅವರ ತಾಯಿ ಜಯಂತಿ, ಸಹೋದರ ಸಂಜಯ್ ನಾಗಪುರಕ್ಕೆ ತೆರಳಿ, ತಲೆಮರೆಸಿಕೊಂಡಿದ್ದರು. ಗಾನವಿ ಅವರ ಪೋಷಕರು ಹಾಗೂ ಸಂಬಂಧಿಕರು ವಿದ್ಯಾರಣ್ಯ ಪುರದಲ್ಲಿರುವ ಸೂರಜ್ ಅವರ ಮನೆ ಎದುರು ಶವವಿಟ್ಟು ಡಿಸೆಂಬರ್ 26ರಂದು ಪ್ರತಿಭಟನೆ ನಡೆಸಿ, ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.ಹಾಗೂ ಎಫ್‌ಐಆರ್ ದಾಖಲಾಗಿರುವುದರ ಬೆನ್ನಲ್ಲೇ,ನಾಗ್ಪುರದ ಹೋಟೆಲ್ ಕೊಠಡಿಯಲ್ಲಿ ಸೂರಜ್ ಶವ ಶನಿವಾರ ಬೆಳಿಗ್ಗೆ ಪತ್ತೆಯಾಗಿದೆ. ಸೂರಜ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಹೋಟೆಲ್ ಸಿಬ್ಬಂದಿ ವಿಷಯ ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಮರಣಪತ್ರವೇನೂ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.

ಸೂರಜ್ ಹಾಗೂ ಗಾನವಿ ಅದ್ದೂರಿಯಾಗಿ ವಿವಾಹವಾಗಿದ್ದರು. 40 ಲಕ್ಷ ಖರ್ಚು ಮಾಡಿ ಅರಮನೆ ಮೈದಾನದಲ್ಲಿ ಆರತಕ್ಷತೆ ಮಾಡಲಾಗಿತ್ತು. ಅಲ್ಲದೆ, ದಂಪತಿಯನ್ನು ಶ್ರೀಲಂಕಾಕ್ಕೆ ಹನಿಮೂನ್ ಗೂ ಕಳುಹಿಸಲಾಗಿತ್ತು. ಆದರೆ, ದಂಪತಿ ಐದನೇ ದಿನಕ್ಕೆ ವಾಪಸ್ ಬಂದಿದ್ದರು. ಈ ಸಂಬಂಧ ಸೂರಜ್ ಹಾಗೂ ಅವರ ಕುಟುಂಬಸ್ಥರನ್ನು ಕೇಳಿದಾಗ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ನಿಮ್ಮ ಮಗಳನ್ನು ಕರೆದುಕೊಂಡು ಹೋಗಿ ಎಂದು ಬೆದರಿಸಿದ್ದರು. ಹೀಗಾಗಿ, ಗಾನವಿ ತನ್ನ ತವರು ಮನೆಗೆ ಬಂದಿದ್ದರು. ಬುಧವಾರ ಮಧ್ಯಾಹ್ನ ಕೊಠಡಿಗೆ ತೆರಳಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅದನ್ನು ಗಮನಿಸಿದ ಕುಟುಂಬದ ಸದಸ್ಯರು ಕೂಡಲೇ ನೇಣು ಕುಣಿಕೆಯಿಂದ ಆಕೆಯನ್ನು ಇಳಿಸಿ, ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು’ ಎಂದು ಪೊಲೀಸರು ಹೇಳಿದ್ದರು.

 

Related Articles

Back to top button