ರಾಜಕೀಯ

ಸಂಪುಟ ವಿಸ್ತರಣೆ ಬಳಿಕ ಸಚಿವ ಸ್ಥಾನ ವಂಚಿತರಿಗೆ ಶೀಘ್ರವೇ ನಿಗಮ ಮಂಡಳಿ!

Views: 1

ಕನ್ನಡ ಕರಾವಳಿ ಸುದ್ದಿ: ಸಂಪುಟ ವಿಸ್ತರಣೆಯ ಬಳಿಕ ಇದೀಗ ನಿಗಮ ಮಂಡಳಿ ಅಧ್ಯಕ್ಷ- ಉಪಾಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಚರ್ಚೆಗಳು ಶುರುವಾಗಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ವಾರದಲ್ಲಿ ನಿಗಮ ಮಂಡಳಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ ನಡೆಯಲಿದೆ ಎನ್ನಲಾಗಿದೆ.

ನಿಗಮ ಮಂಡಳಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರಾಗಿ ನೇಮಕಗೊಂಡು ಎರಡೂವರೆ ವರ್ಷ ಪೂರೈಸಿರುವ ಅಧ್ಯಕ್ಷರನ್ನು ಕೈಬಿಟ್ಟು ಹೊಸಬರಿಗೆ ಸ್ಥಾನ ನೀಡಲು ತೀರ್ಮಾನಿಸಲಾಗಿದ್ದು, ಸುಮಾರು 70ಕ್ಕೂ ಹೆಚ್ಚು ನಿಗಮಗಳಿಗೆ ಹೊಸ ಅಧ್ಯಕ್ಷ, ಉಪಾಧ್ಯಕ್ಷರನ್ನು ನೇಮಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಆದ್ದರಿಂದ ಎರಡೂವರೆ ವರ್ಷ ಪೂರೈಸಿರುವ ಅಧ್ಯಕ್ಷರುಗಳಿಗೆ ರಾಜೀನಾಮೆ ನೀಡುವಂತೆ ಸಂದೇಶ ನೀಡಲಾಗುತ್ತಿದೆ ಎನ್ನಲಾಗಿದೆ.

ಸಚಿವಸ್ಥಾನ ವಂಚಿತ ಹಿರಿಯ ಶಾಸಕರು ಆಯಕಟ್ಟಿನ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಆದ್ದರಿಂದ ಕೆಲ ಶಾಸಕರು ಪಕ್ಷದ ಹೈಕಮಾಂಡ್ ಬಳಿಕ ನಿಗಮ ಮಂಡಳಿಗೆ ಅವಕಾಶ ನೀಡುವಂತೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ವಂಚಿತರಿಗೆ ಅವಕಾಶ ಕಲ್ಪಿಸಲು ಡಿಕೆಶಿ, ಸಿದ್ದು ಹಾಗೂ ಬಿ.ಕೆ.ಹರಿಪ್ರಸಾದ್ ಸಹ ಒಲವು ತೋರಿರುವುದರಿಂದ ರಾಜ್ಯದಲ್ಲಿ ಪ್ರಮುಖ 20 ನಿಗಮಗಳಿಗೆ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಿಸುವುದು ಬಹುತೇಕ ಖಚಿತ ಎನ್ನಲಾಗಿದೆ. ಇನ್ನುಳಿದ ನಿಗಮಗಳನ್ನು ಕಾರ್ಯಕರ್ತರಿಗೆ ನೀಡುವ ಮೂಲಕ ಬಾಕಿಯಿರುವ ಒಂದು ವರ್ಷ ಎಂಟು ತಿಂಗಳ ಅವಧಿಗೆ ಅಧಿಕಾರ ನೀಡುವ ಆಲೋಚನೆಯಲ್ಲಿ ಪಕ್ಷದ ನಾಯಕರಿದ್ದಾರೆ.

ಶಿವಕುಮಾ‌ರ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ನಿಗಮ -ಮಂಡಳಿಗಳಿಗೆ ಅಧ್ಯಕ್ಷರು ಮತ್ತು ನಿರ್ದೇಶಕರ ನೇಮಕ ಮಾಡಲು ಹಲವು ಬಾರಿ ಪ್ರಯತ್ನಿಸಿದ್ದರು. ಆದರೆ ಸಾಧ್ಯವಾಗಿರಲಿಲ್ಲ. ಆದರೀಗ ಮುಖ್ಯಮಂತ್ರಿಯಾದ ಬಳಿಕ ಈ ಪ್ರಕ್ರಿಯೆ ನಡೆಸದಿದ್ದರೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಆದ್ದರಿಂದ ನಿಗಮ ಮಂಡಳಿಗಳಿಗೆ ಶೀಘ್ರ ನೇಮಕ ಮಾಡುವಂತೆ ಪಕ್ಷದ ಹೈಕಮಾಂಡ್ ಬಳಿ ಒತ್ತಡ ಹೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.ಬಾಕಿಯಿರುವ ಅವಧಿಗಾದರೂ ನೇಮಕ ಮಾಡುವುದು ಸೂಕ್ತ ಎನ್ನುವ ಮಾತುಗಳು ಕೇಳಿಬಂದಿರುವುದರಿಂದ ಪಕ್ಷದ ಹೈಕಮಾಂಡ್ ಸಹ ಸಮ್ಮತಿಸಿದೆ ಎನ್ನಲಾಗಿದೆ.

 

 

Related Articles

Back to top button
error: Content is protected !!