ಶಿರೂರು ಜ್ಞಾನದಾ ಶಿಕ್ಷಣ ಸಂಸ್ಥೆಯಲ್ಲಿ ವಿಶ್ರಾಂತ ಶಿಕ್ಷಕ ಶ್ರೀ ಯು.ಹೆಚ್ ರಾಜಾರಾಮ್ ಭಟ್ ಅವರಿಂದ ಧ್ವಜಾರೋಹಣ

Views: 173
ಕನ್ನಡ ಕರಾವಳಿ ಸುದ್ದಿ: ಶಿರೂರು ಜ್ಞಾನದಾ ಶೈಕ್ಷಣಿಕ ಸಂಸ್ಥೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಪ್ಪುಂದದ ವಿಶ್ರಾಂತ ಶಿಕ್ಷಕರಾದ ಶ್ರೀ ಯು.ಹೆಚ್ ರಾಜಾರಾಮ್ ಭಟ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಹುತಾತ್ಮರಾದ ವೀರ ದೇಶ ಭಕ್ತ ಸ್ವಾತಂತ್ರ್ಯ ಹೋರಾಟಗಾರರನ್ನು ಕೇವಲ ಈ ದಿನ ಸ್ಮರಿಸದೇ ಅವರ ಆದರ್ಶ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ದೇಶದ ಪ್ರಗತಿಗೆ ಎಲ್ಲರೂ ಕೈ ಜೋಡಿಸಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಪರಿಸರ ಸಂರಕ್ಷಣೆ ಅರಿವು ಮತ್ತು ಅಗತ್ಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಪ್ರಾಂಶುಪಾಲರಾದ ಡಾ.ರವಿದಾಸ್ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು
ಶಾಲಾ ವಿದ್ಯಾರ್ಥಿಗಳ ತಂಡಗಳಿಂದ ಆಕರ್ಷಕ ಪಥಸಂಚಲನ ವೀಕ್ಷಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಧೀರಜ್ ಆರ್ ಶಿರೂರ್ಕರ್ ಸರ್ವರಿಗೂ ಸ್ವತಂತ್ರ ದಿನಾಚರಣೆಯ ಶುಭಾಶಯಗಳನ್ನು ಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಟ್ರಸ್ಟಿ ಶ್ರೀಮತಿ ಚಂಪಾ ಆರ್ ಶಿರೂರ್ಕರ್ ಸ್ವಾತಂತ್ರ್ಯದ ದೀಪ ಸದಾ ಪ್ರಜ್ವಲವಾಗಿ ಉರಿದರೆ ಮಾತ್ರ ದೇಶಭಕ್ತಿಯ ಅಲೆಯೂ ಜೀವಂತವಾಗಿರುತ್ತದೆ ನಮ್ಮ ದೇಶ ವೈವಿಧ್ಯತೆಯ ನಾಡು ಭಿನ್ನತೆಯಲ್ಲಿ ಏಕತೆಯನ್ನು ಪ್ರತಿಪಾದಿಸಿ ಇಂದಿಗೂ ಅದೇ ದಾರಿಯಲ್ಲಿ ಸಾಗುತ್ತಿರುವ ಸುಸಂಸ್ಕೃತ ಬೀಡು, ಭಾಷೆ, ವೇಷ, ಆಹಾರ, ವೈಚಾರಿಕತೆಯಲ್ಲಿ ಹೆಜ್ಜೆ ಹೆಜ್ಜೆಗೂ ವಿಭಿನ್ನತೆಯನ್ನು ಪೋಷಿಸುವ ಈ ನಾಡನ್ನು ಅಂತರ್ಗತವಾಗಿ ಬಂಧವೊಂದು ಹಿಡಿದಿಟ್ಟಿದೆ ಆ ಬಂಧವೇ ಭಾರತ ಎಂಬ ನಮ್ಮ ಹೆಮ್ಮೆ. ದೇಶಭಕ್ತಿಯ ಜೊತೆಗೆ ಮಾನವಪ್ರೇಮ ಸಾಮಾಜಿಕ ಕಳಕಳಿ ಸ್ವಚ್ಛತೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳೋಣ ಸ್ವಾತಂತ್ರ್ಯದ ನಿಜ ಅರ್ಥ ಅರಿತು ನಾವೆಲ್ಲರೂ ಒಂದೇ ಎಂದು ಒಗ್ಗಟ್ಟಿನಿಂದ ಬಾಳೋಣ ಅದಕ್ಕೆ ಈ ದಿನ ಪ್ರೇರಣೆಯಾಗಲಿ ಎಂದರು
10 ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಸಿಂಚನಾ ಸ್ವಾಗತಿಸಿ, 9ನೇ ತರಗತಿ ಕುಮಾರಿ ಮಾನ್ಯತಾ ವಂದಿಸಿ, 9ನೇ ತರಗತಿ ವಿದ್ಯಾರ್ಥಿನಿ ಕುಮಾರಿ ವೈಷ್ಣವಿ ಜಿ ನಿರೂಪಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.