ವಿದ್ಯಾರ್ಥಿ ದಿಗಂತ್ ಉಡುಪಿಯಲ್ಲಿ ಪ್ರತ್ಯಕ್ಷ!.. ಇಷ್ಟು ದಿನಗಳ ಕಾಲ ಎಲ್ಲಿಗೆ ಹೋಗಿದ್ದ..ಯಾರೊಂದಿಗೆ ಇದ್ದ!?

Views: 277
ಕನ್ನಡ ಕರಾವಳಿ ಸುದ್ದಿ: ನಾಪತ್ತೆಯಾಗಿದ್ದ ಫರಂಗಿಪೇಟೆಯ ವಿದ್ಯಾರ್ಥಿ ದಿಗಂತ ಹನ್ನೆರಡನೇ ದಿನ ಮಾ.8 ರಂದು ಉಡುಪಿ ಕಲ್ಲಂಕದಲ್ಲಿರುವ ಡಿ ಮಾರ್ಟ್‌ನಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಆತನ ಮನೆಯವರು ನಿಟ್ಟುಸಿರುಬಿಟ್ಟಿದ್ದಾರೆ.
ಶನಿವಾರ ಮಧ್ಯಾಹ್ನ 3 ರಿಂದ 4 ಗಂಟೆ ಮಧ್ಯೆ ಈತ ಪತ್ತೆಯಾಗಿದ್ದು, ಆತನನ್ನು ಉಡುಪಿ ಪೊಲೀಸರು ದಕ್ಷಿಣ ಕನ್ನಡ ಪೊಲೀಸರಿಗೆ ಹಸ್ತಾಂತರಿಸಲಾಯಿತು.
ಫೆ.25ರಂದು ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ದಿಗಂತ್ ಬಳಿಕ ಹಿಂದಿರುಗಿ ಬಂದಿರಲಿಲ್ಲ. ರೈಲ್ವೆ ಹಳಿಯಲ್ಲಿ ಆತನ ಚಪ್ಪಲಿಗಳು, ಮೊಬೈಲ್ ಪತ್ತೆಯಾಗಿ ಸಾಕಷ್ಟು ಅನುಮಾನಗಳು ಸೃಷ್ಟಿಯಾಗಿತ್ತು. ಫರಂಗಿಪೇಟೆಯಲ್ಲಿ ಪ್ರತಿಭಟನೆ ನಡೆದು ಪೊಲೀಸರ ತನಿಖೆ ಸರಿಯಾಗಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.
ಈತ ಮನೆಯಿಂದ ಹೋದವನು ಎಲ್ಲಿಗೆ ಹೋದ ಎಂಬ ಕುರಿತು ಸಮೀಪದಲ್ಲಿರುವ ಸಿಸಿ ಕ್ಯಾಮರಾ ಸಹಿತ ಸಂಬಂಧಿಕರು, ಸ್ನೇಹಿತರು ಹಾಗೂ ಪರಿಚಯಸ್ಥರನ್ನೆಲ್ಲಾ ಪೊಲೀಸರು ವಿಚಾರಣೆ ನಡೆಸಿದ್ದರು. ವಿದ್ಯಾರ್ಥಿ ನಾಪತ್ತೆ ಪ್ರಕರಣದ ಬಳಿಕ ಫರಂಗಿಪೇಟೆಯಲ್ಲಿ ಪೊಲೀಸರಿಗೆ ಒತ್ತಡ ಹೇರುವ ಸಲುವಾಗಿ ಪ್ರತಿಭಟನೆ ನಡೆಸಲಾಗಿತ್ತು. ಇದಾದ ಬಳಿಕ ತನಿಖೆ ಚುರುಕುಗೊಂಡಿತು.
ಬಂಟ್ವಾಳದಲ್ಲಿ ಕೆಲಸ ಮಾಡಿದ್ದ ಪ್ರಮುಖ ಪೊಲೀಸ್ ಅಧಿಕಾರಿಗಳೇ ತನಿಖಾ ತಂಡದಲ್ಲಿದ್ದು, ರಾತ್ರಿ ಹಗಲೆನ್ನದೇ ತನಿಖೆ ಕೈಗೊಂಡಿದ್ದರು. ಆತನ ಮೊಬೈಲ್ ಸಂದೇಶ, ಚಾಟ್ ಹಿಸ್ಟರಿಗಳನ್ನು ಕಲೆ ಹಾಕಿ ಇದೇನಾದರೂ ಪತ್ತೆ ಕಾರ್ಯಕ್ಕೆ ಸಹಾಯವಾಗುತ್ತಾ ಎಂಬುದನ್ನು ನೋಡಲಾಯಿತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಅವರೇ ಖುದ್ದು ಕಾರ್ಯಾಚರಣೆ ನೇತೃತ್ವ ವಹಿಸಿದ್ದರು.
ಮನೆಯಿಂದ ಹೊರಟು ನಾಪತ್ತೆ ಆದದ್ದೆಲ್ಲಿ?
ಫೆ.25ರಂದು ಸಂಜೆ 7 ಗಂಟೆಗೆ ಮನೆಯಿಂದ ದೇವಸ್ಥಾನಕ್ಕೆಂದು ಹೊರಟಿದ್ದ ದಿಗಂತ್, ರಾತ್ರಿ 8.30ರ ಸುಮಾರಿಗೆ ಆಂಜನೇಯ ವ್ಯಾಯಾಮ ಶಾಲೆ ಬಳಿ ಓಡಾಡಿದ್ದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಅಲ್ಲಿಂದ ಯಾವ ಕಡೆಗೆ ಹೋಗಿದ್ದಾನೆ ಎಂಬುದು ಸಮೀಪದ ಯಾವುದೇ ಸಿಸಿ ಟಿವಿಗಳಲ್ಲಿ ದಾಖಲಾಗಿಲ್ಲ. ಆತನ ಚಪ್ಪಲಿಗಳು ಹಾಗೂ ದೂರವಾಣಿ ರೈಲ್ವೆ ಹಳಿಯ ಬಳಿ ಸಿಕ್ಕಿದ್ದು, ಪತ್ತೆ ಕಾರ್ಯಕ್ಕೆ ತೊಡಕುಂಟಾಗಿತ್ತು. ರೈಲ್ವೆ ನಿಲ್ದಾಣ, ಹಳಿಯ ಆಸುಪಾಸಿನಲ್ಲಿ ಯಾವುದೇ ಕ್ಯಾಮರಾಗಳು ಇಲ್ಲದಿರುವ ಕಾರಣ, ತನಿಖೆ ಕ್ಲಿಷ್ಟವಾಗುತ್ತಿದೆ ಎಂದು ಹೇಳಲಾಯಿತು. ಚಪ್ಪಲಿಯಲ್ಲಿ ರಕ್ತದ ಕಲೆಗಳು ಕಂಡ ಕಾರಣ ಸ್ಥಳೀಯರಿಗೆ ಈತನನ್ನು ಅಪಹರಿಸಿರಬಹುದು ಎಂಬ ಸಂಶಯ ಹುಟ್ಟಿಕೊಂಡ ಬಳಿಕ ಫರಂಗಿಪೇಟೆ ಬಂದ್ ನಡೆಸುವವರೆಗೆ ಪ್ರಕರಣ ಬೆಳೆದಿತ್ತು. ಈತ ಹೋದ ಹೊತ್ತಿನಲ್ಲಿ ಕ್ವಾಲಿಸ್ ಕಾರೊಂದು ತಿರುಗಾಡಿದ್ದು ಕಂಡುಬಂದಿದ್ದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿತ್ತು.
ಉಡುಪಿ ಡಿ-ಮಾರ್ಟ್‌ನಲ್ಲಿ ಪ್ರತ್ಯಕ್ಷ!
ಅಪರಾಹ್ನ ಕಪ್ಪು ಬಣ್ಣದ ಟೀ ಶರ್ಟ್ ಹಾಗೂ ನೀಲಿ ಬಣ್ಣದ ನೈಟ್ ಪ್ಯಾಂಟ್ ಹಾಕಿ ಡಿ-ಮಾರ್ಟ್‌ಗೆ ಆಗಮಿಸಿದ್ದ ಆತ ಬಿಸ್ಕೆಟ್ ಹಾಗೂ ಕಡ್ಲೆಕಾಯಿ ಖರೀದಿಸಿದ್ದ ಈ ವೇಳೆ ಆತನಲ್ಲಿ ಕಪ್ಪುಬಣ್ಣದ ಕೈಚೀಲವೂ ಇತ್ತು. ಮಳಿಗೆಯೊಳಗೆ ಬ್ಯಾಗ್ ಕೊಂಡೊಯ್ಯಬಾರದೆಂಬ ನಿಯಮವಿದ್ದ ಕಾರಣ ಅಲ್ಲಿನ ಸಿಬಂದಿ ಆತನನ್ನು ಪ್ರಶ್ನಿಸಿದ್ದರು. ಈ ವೇಳೆ ಆತನ ನಡತೆಯಲ್ಲಿ ಸಂಶಯ ವ್ಯಕ್ತವಾಗಿತ್ತು. ಈ ವೇಳೆ ಮಳಿಗೆಯ ಮ್ಯಾನೇಜರ್ ಆಗಮಿಸಿದ್ದು, ಅವರಿಗೆ ಆತ ದಿಗಂತ್ ಎಂಬುದು ತಿಳಿಯಿತು. ಬಳಿಕ ದಿಗಂತ್‌ನಿಂದಲೇ ಆತನ ಮನೆಯ ವರಿಗೆ ಕರೆ ಮಾಡಿಸಿ ಉಡುಪಿಯಲ್ಲಿ ಇರುವ ಬಗ್ಗೆ ತಿಳಿಸಲಾಯಿತು. ನಗರ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಬಂದು ಆತನನ್ನು ವಶಕ್ಕೆ ಪಡೆದರು.
ಮಳಿಗೆಯ ಸಿಬಂದಿ ಹೇಳುವ ಪ್ರಕಾರ ಆತ ಒಬ್ಬನೇ ಬಂದಿದ್ದ. ಆದರೆ ಬಂದಿರುವುದು ಹೇಗೆ ಎಂಬ ಬಗ್ಗೆ ಮಾಹಿತಿ ಇಲ್ಲ, ಮಳಿಗೆಯಿಂದ ಹೊರಭಾಗದಿಂದ ಒಳಭಾಗದವರೆಗೂ ಸಂಪೂರ್ಣ ಸಿಸಿಟಿವಿ ಅಳವಡಿಸಿದ್ದರೂ ಅದರ ತುಣುಕುಗಳು ಲಭ್ಯವಾಗಲಿಲ್ಲ, ಪೊಲೀಸರು ಈ ಸಂಸ್ಥೆಯ ಸಿಬಂದಿ ಹಾಗೂ ಮ್ಯಾನೇಜರ್ ಅನ್ನು ಇನ್ನಷ್ಟು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ದಿಗಂತ್ ಪತ್ತೆಯಾದ ಸಂದರ್ಭದಲ್ಲಿ ಆತನ ವರ್ತನೆ ವಿಚಿತ್ರವಾಗಿತ್ತು. ಮಾದಕ ವ್ಯಸನಿಗಳಂತೆ ವರ್ತಿಸುತ್ತಿದ್ದ ಎನ್ನಲಾಗಿದೆ. ಇಷ್ಟು ದಿನಗಳ ಕಾಲ ಆತ ಯಾರ ಆಶ್ರಯದೊಂದಿಗೆ ಇದ್ದ ಹಾಗೂ ಇಲ್ಲಿಗೆ ಹೇಗೆ ಬಂದ ಎಂಬ ಬಗ್ಗೆ ಮಾಹಿತಿ ಲಭಿಸಿದರೆ ಮುಂದಿನ ತನಿಖೆಗೆ ಅನುಕೂಲವಾಗಲಿದೆ.ಇವೆಲ್ಲವೂ ಗೊಂದಲಮಯವಾಗಿದ್ದು ತೀವ್ರ ವಿಚಾರಣೆ ಬಳಿಕವಷ್ಟೇ ಸತ್ಯಾಂಶ ಹೊರ ಬರಬೇಕಾಗಿದೆ.