ವಿದ್ಯಾರ್ಥಿಯ ಗುಪ್ತಾಂಗಕ್ಕೆ ಡಂಬಲ್ಸ್ ನೇತುಹಾಕಿ ರ್‍ಯಾಗಿಂಗ್, ಅಮಾನವೀಯ ಕೃತ್ಯಕ್ಕೆ ತೀವ್ರ ಆಕ್ರೋಶ

Views: 297
ಕನ್ನಡ ಕರಾವಳಿ ಸುದ್ದಿ: ಮೊದಲ ವರ್ಷದ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ಮಾಡಿದ ಆರೋಪದ ಕಾರಣ ಮೂರನೇ ವರ್ಷದ ಐವರು ನರ್ಸಿಂಗ್ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ
ಮೊದಲ ವರ್ಷದ ವಿದ್ಯಾರ್ಥಿಗಳನ್ನು ಬೆತ್ತಲೆಗೊಳಿಸಿ, ಅವರ ಮರ್ಮಾಂಗಗಳಿಗೆ ‘ಡಂಬಲ್’ಗಳನ್ನು ನೇತುಬಿಟ್ಟಿದ್ದರು. ರೇಖಾಗಣಿತದಲ್ಲಿ ಬಳಸುವ ಕೈವಾರದಿಂದ ಚುಚ್ಚಿ ಗಾಯಗಳನ್ನು ಮಾಡಿ, ಆ ಗಾಯಗಳಿಗೆ ಉರಿ ತರಿಸುವ ಕ್ರೀಮ್ ಹಚ್ಚಲಾಗಿತ್ತು. ನೋವಿನಿಂದ ಚೀರಿಕೊಂಡಾಗ, ಬಾಯಿಗೂ ಬಲವಂತವಾಗಿ ಕ್ರೀಮ್ ಹಚ್ಚಿದ್ದರು ಎಂದು ದೂರು ನೀಡಿದ ವಿದ್ಯಾರ್ಥಿಯೊಬ್ಬರು ಅಳಲು ತೋಡಿಕೊಂಡಿದ್ದಾರೆಂದು ಪೊಲೀಸರು ಹೇಳಿದ್ದಾರೆ.
ಹಿರಿಯ ವಿದ್ಯಾರ್ಥಿಗಳ ಈ ಮೃಗೀಯ ವರ್ತನೆ ವಿರುದ್ಧ ಮೂವರು ವಿದ್ಯಾರ್ಥಿಗಳು ಇದೀಗ ಠಾಣೆ ಮೆಟ್ಟಿಲೇರಿದ್ದು, ಅದರಂತೆ ಐವರು ವಿದ್ಯಾರ್ಥಿಗಳನ್ನು ಅಮಾನತು ಮಾಡಿ ಆ್ಯಂಟಿ ರ್‍ಯಾಗಿಂಗ್ ಕಾಯ್ದೆಯಡಿ ಬಂಧಿಸಲಾಗಿದೆ.
ವಿವಸ್ತ್ರಗೊಳಿಸಿ ಹಿಂಸೆ ನೀಡುವ ದೃಶ್ಯಗಳನ್ನು ವಿದ್ಯಾರ್ಥಿಗಳು ಚಿತ್ರೀಕರಣ ಕೂಡ ಮಾಡಿಕೊಳ್ಳುತ್ತಿದ್ದರು. ರ್‍ಯಾಗಿಂಗ್ ವಿಚಾರ ಯಾರ ಮುಂದೆಯಾದರೂ ಬಾಯ್ಬಿಟ್ಟರೆ ಅದನ್ನು ವೈರಲ್ ಮಾಡುವ, ಅವರ ಶೈಕ್ಷಣಿಕ ಭವಿಷ್ಯವನ್ನೇ ಹಾಳು ಮಾಡುವ ಬೆದರಿಕೆಯನ್ನು ಹಾಕುತ್ತಿದ್ದರು.
ಹಣ ವಸೂಲಿ: ಹಿರಿಯ ವಿದ್ಯಾರ್ಥಿಗಳ ಆಟಾಟೋಪ ಚಿತ್ರಹಿಂಸೆಗಷ್ಟೇ ನಿಲ್ಲದೆ, ಕಿರಿಯ ವಿದ್ಯಾರ್ಥಿಗಳಿಂದ ಭಾನುವಾರ ಮದ್ಯ ಸೇವಿಸಲು ಬಲವಂತವಾಗಿ ಹಣವನ್ನೂ ವಸೂಲಿ ಮಾಡಲಾಗುತ್ತಿತ್ತು. ಹಣ ಕೊಡಲು ನಿರಾಕರಿಸಿದರೆ ಅವರಿಗೆ ಮನಸೋ ಇಚ್ಛೆ ಹಲ್ಲೆ ನಡೆಸಲಾಗುತ್ತಿತ್ತು. ಹಿರಿಯ ವಿದ್ಯಾರ್ಥಿಗಳಿಗೆ ಹಣಕೊಡಲಾಗದ ವಿದ್ಯಾರ್ಥಿಯೊಬ್ಬ ತಾನು ಅನುಭವಿಸುತ್ತಿರುವ ಚಿತ್ರಹಿಂಸೆಯನ್ನು ತಂದೆಯ ಮುಂದೆ ಹೇಳಿಕೊಂಡಿದ್ದು, ಪೋಷಕರ ಸೂಚನೆ ಮೇರೆಗೆ ಇದೀಗ ಪೊಲೀಸರಿಗೆ ದೂರು ನೀಡಲಾಗಿದೆ.ಈ ಘಟನೆ ಬೆಳಕಿಗೆ ಬಂದಿರುವುದು ತೀವ್ರ ಆಕ್ರೋಶ, ಆತಂಕಕ್ಕೆ ಕಾರಣವಾಗಿದೆ.