ವಕ್ವಾಡಿ: ಏತ ನೀರಾವರಿ ಮೂಲಕ ನೀರು ಹರಿಸುವ 2ನೇ ಹಂತದ ಖಾಸಗಿ ಯೋಜನೆಗೆ ಚಾಲನೆ

Views: 239
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕು ಕಾಳಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ವಕ್ವಾಡಿ ಗ್ರಾಮದ ತೆಂಕಬೆಟ್ಟುವಿನಲ್ಲಿ ವಾರಾಹಿ ನಾಲೆಯಿಂದ ಹೊಳೆಗೆ ಹರಿದು ಬರುತ್ತಿರುವ ನೀರಿಗೆ ಏತ ನೀರಾವರಿ ಮೂಲಕ ಇಂಗು ಗುಂಡಿಗೆ ಮತ್ತು ಪೈಪ್ ಲೈನ್ ಮೂಲಕ ಮನೆ ಮನೆಗೆ ಕುಡಿಯುವ ನೀರು, ಬಾವಿಗಳಿಗೆ ನೀರು ಹರಿಸುವ ಎರಡನೇ ಹಂತದ ಖಾಸಗಿ ಯೋಜನೆಗೆ ಏ.13 ರಂದು ರವಿವಾರ ಚಾಲನೆ ನೀಡಲಾಯಿತು.
ಕುಂಭಾಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇಗುಲದ ವ್ಯವಸ್ಥಾಪಕರಾದ ರಾಜಶೇಖರ್ ಹೆಗ್ಡೆ ಚಾಲನೆ ನೀಡಿದರು. ನಂತರ ಅವರು ಮಾತನಾಡಿ, ಸಹಬಾಳ್ವೆ ಒಗ್ಗಟ್ಟಿನಿಂದ ಹೋರಾಟ ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು. ಆ ನಿಟ್ಟಿನಲ್ಲಿ ವಕ್ವಾಡಿ ತೆಂಕಬೆಟ್ಟು ಪರಿಸರದವರು ವಾರಾಹಿ ನೀರನ್ನು ಸದ್ಬಳಕೆ ಮಾಡಿಕೊಂಡು ಪ್ರತಿ ಮನೆ ಮನೆಯ ಬಾವಿಗೆ ನೀರು ಹರಿಸುವ ಮಹತ್ವಪೂರ್ಣವಾದ ಯೋಜನೆ ಇದಾಗಿದ್ದು, ಇದು ಕೇವಲ ಮನುಷ್ಯರಿಗೆ ಮಾತ್ರವಲ್ಲದೆ ಪ್ರಾಣಿ, ಪಕ್ಷಿ, ಗಿಡಮರಗಳಿಗೂ ಪ್ರಯೋಜನಕಾರಿಯಾಗಿದ್ದು, ಇದೊಂದು ಮಹಾನ್ ಪುಣ್ಯದ ಕೆಲಸ ಎಂದು ಶುಭ ಹಾರೈಸಿದರು.
ಚಂದ್ರಶೇಖರ್ ಶೆಟ್ಟಿ, ಗಣೇಶ್ ಶೆಟ್ಟಿ, ಶಂಕರ್ ಶೆಟ್ಟಿ, ಆನಂದ ಶೆಟ್ಟಿ, ರಾಜ್ ಶೇಖರ್ ಹೆಗ್ಡೆ ಅವರನ್ನು ಗೌರವಿಸಿದರು.
ಸುಧಾಕರ್ ಆಚಾರ್, ಶ್ರೀಮತಿ ಸುಶೀಲಾ ಗಣೇಶ ಶೆಟ್ಟಿ, ಶ್ರೀಮತಿ ಮೂಕಾಂಬಿಕಾ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ, ಶ್ರೀಮತಿ ಗಿರಿಜಾ ಶೆಟ್ಟಿ, ಶ್ರೀಮತಿ ಅಮಿತಾ ಶೆಟ್ಟಿ, ಮಾl ಅಥರ್ವ ಶೆಟ್ಟಿ, ದೇವರಾಡಿ ಶ್ರೀ ಬ್ರಹ್ಮಲಿಂಗೇಶ್ವರ ಹಾಗೂ ಚಿಕ್ಕು ಸಪರಿವಾರ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಯೋಜನೆಗೆ ಸಹಕರಿಸಿದವರನ್ನು ಅಭಿನಂದಿಸಲಾಯಿತು. ಸುಧಾಕರ ವಕ್ವಾಡಿ ಕಾರ್ಯಕ್ರಮ ನಿರ್ವಹಿಸಿದರು.