ವಕ್ವಾಡಿಯಲ್ಲಿ ಕಾರ್ತಿಕ ದೀಪೋತ್ಸವ ಸಂಪನ್ನ

Views: 9
ಕುಂದಾಪುರ: ವಕ್ವಾಡಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಗುರುವಾರ ಕಾರ್ತಿಕ ದೀಪೋತ್ಸವ ಸಂಭ್ರಮದಿಂದ ನಡೆಯಿತು.

ವಕ್ವಾಡಿ ಗ್ರಾಮದ ಸಮಸ್ತ ಭಕ್ತಾಭಿಮಾನಿಗಳು ಹಾಜರಿದ್ದರು.ದೀಪೋತ್ಸವದ ನಂತರ ರಂಗ ಪೂಜೆ, ಬಲಿ ಉತ್ಸವ, ಮಹಾಮಂಗಳಾರತಿ ನಂತರ ಪ್ರಸಾದ ವಿತರಣೆ ನಡೆಯಿತು.ಹಿರಿಯ ಪುರೋಹಿತರಾದ ಪ್ರಸನ್ನ ಕುಮಾರ್ ಐತಾಳ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಿತು.
ಕಾರ್ಯಕ್ರಮದಲ್ಲಿ ಮೊಕ್ತೇಸರರು, ಅರ್ಚಕರು ವ್ಯವಸ್ಥಾಪನಾ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.

ಕಾರ್ತಿಕ ದೀಪೋತ್ಸವದ ಮಹತ್ವ
ದೇವಸ್ಥಾನಗಳಲ್ಲಿ ದೀಪ ಬೆಳಗುವ ಕಾರ್ತಿಕ ಮಾಸ ನವೆಂಬರ್ 14 ರಿಂದ ಆರಂಭವಾಗಿದೆ. ಹಿಂದೂ ಪಂಚಾಂಗದಲ್ಲಿ ಚಳಿಗಾಲದಲ್ಲಿ ಆರಂಭವಾಗುವ ಕಾರ್ತಿಕ ಮಾಸ ಅತ್ಯಂತ ಪವಿತ್ರ ಮತ್ತು ಶ್ರೇಷ್ಠ ಮಾಸ ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ದೀಪಾರಾಧನೆ ಮಾಡಿದರೆ ಐಶ್ವರ್ಯ, ಸಂಪತ್ತು, ಆರೋಗ್ಯ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಈ ಕಾರಣಕ್ಕೆ ದೇವಾಲಯಗಳಲ್ಲಿ ಕಾರ್ತಿಕ ದೀಪೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ.

ಕಾರ್ತಿಕ ನಕ್ಷತ್ರ ನವೆಂಬರ್/ಡಿಸೆಂಬರ್ ತಿಂಗಳಿನಲ್ಲಿ ಚಂದ್ರನಿಗೆ ಅತ್ಯಂತ ಹತ್ತಿರಕ್ಕೆ ಬರುತ್ತದೆ. ಈ ಕಾರಣಕ್ಕೆ ಹಿಂದೂ ಪಂಚಾಂಗದ ಎಂಟನೇ ತಿಂಗಳಿಗೆ ಕಾರ್ತಿಕ ಮಾಸ ಎಂದು ಕರೆಯಲಾಗುತ್ತದೆ. ಪರಿಣಾಮವಾಗಿ ಹುಣ್ಣಿಮೆಯ ಚಂದ್ರನು ಪ್ರಕಾಶಮಾನವಾಗಿ ಕಾಣುತ್ತಾನೆ. ಅದು ನೋಡುಗರಿಗೂ ಸುಂದರ ಹಾಗೂ ಆಕರ್ಷಕವಾಗಿ ಕಾಣಿಸುತ್ತದೆ. ಪ್ರತಿ ಮಾಸಕ್ಕೆ ಒಬೊಬ್ಬ ದೇವರು ಇರುವಂತೆ ಕಾರ್ತಿಕ ಮಾಸದ ಅಧಿಪತಿ ಶಿವ. ಈ ಮಾಸದಲ್ಲಿ ಶಿವನಿಗೆ ದೀಪೋತ್ಸವ ನಡೆಯುವಂತೆ ವಿಷ್ಣುವಿಗೆ ತುಳಸಿ ಜೊತೆ ಕಲ್ಯಾಣವೂ ನಡೆಯುತ್ತದೆ. ಈ ಕಾರಣಕ್ಕೆ ಶಿವ ಸೇರಿದಂತೆ ವಿವಿಧ ದೇವರ ಪೂಜೆ ಮಾಡುವುದರ ಮೂಲಕ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.






