ರಾಜ್ಯದ ಐವರು ಬಿಜೆಪಿ ನಾಯಕರಿಗೆ ಹೈಕಮಾಂಡ್ ಶೋಕಾಸ್ ನೋಟಿಸ್

Views: 122
ಕನ್ನಡ ಕರಾವಳಿ ಸುದ್ದಿ: ಪಕ್ಷದ ಶಿಸ್ತು ಉಲ್ಲಂಘನೆ, ಬಹಿರಂಗವಾಗಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕರ್ನಾಟಕದ ಐವರು ಬಿಜೆಪಿ ನಾಯಕರಿಗೆ ಹೈಕಮಾಂಡ್ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಬಿಜೆಪಿಯ ಕೇಂದ್ರ ಶಿಸ್ತು ಸಮಿತಿಯು, ರಾಜ್ಯದ ಹಿರಿಯ ನಾಯಕ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮಾಜಿ ಸಚಿವ ಎಂಪಿ ರೇಣುಕಾಚಾರ್ಯ, ಹರಿಹರ ಶಾಸಕ ಬಿ.ಪಿ. ಹರೀಶ್, ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಮತ್ತು ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಿದೆ.
ಸಾರ್ವಜನಿಕ ವೇದಿಕೆಗಳಲ್ಲಿ ಪಕ್ಷದ ಅಂತರಿಕ ವಿಚಾರಗಳನ್ನು ಬಹಿರಂಗವಾಗಿ ಮತ್ತು ಅನಗತ್ಯವಾಗಿ ಹೇಳಿಕೆ ನೀಡಿದ್ದೀರಿ. ಈ ನಿಟ್ಟಿನಲ್ಲಿ ನಿಮ್ಮ ವಿರುದ್ಧ ಯಾಕೆ ಕ್ರಮಕೈಗೊಳ್ಳಬಾರದು ಎಂದು ವಿವರಣೆ ನೀಡುವಂತೆ 72 ಗಂಟೆಗಳ ಕಾಲಾವಕಾಶ ನೀಡಿ ಶಿಸ್ತು ಸಮಿತಿ ನೋಟಿಸ್ ನೀಡಿದೆ.
ಈಗಾಗಲೇ ಸೋಮಶೇಖರ್ ಅವರು ಬಹಿರಂಗವಾಗಿಯೇ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡು, ಸರ್ಕಾರದ ಯೋಜನೆಗಳನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು ಗೊತ್ತೇ ಇದೆ. ಅತ್ತ ಶಿವರಾಮ್ ಹೆಬ್ಬಾರ್ ಅವರ ಸಹ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಈ ಇಬ್ಬರ ನಾಯಕರ ನಡೆ ಬಗ್ಗೆ, ರಾಜ್ಯ ಬಿಜೆಪಿಯ ಶಿಸ್ತು ಸಮಿತಿಯು ಈಗಾಗಲೇ ಕ್ರಮವಾಗಲಿದೆ ಎಂದಿತ್ತು. ಇದೀಗ ಇವರು ಸೇರಿ ಐವರಿಗೆ ನೋಟಿಸ್ ನೀಡಲಾಗಿದೆ.