ಜನಮನ

ರಸ್ತೆ ಸಂಪರ್ಕ ಇಲ್ಲದ ಈ ಗ್ರಾಮದಲ್ಲಿ ಶವ, ರೋಗಿಗಳನ್ನು ಜೋಳಿಗೆಯಲ್ಲಿ ಕಟ್ಟಿಕೊಂಡು ಸಾಗಾಟ !!

Views: 55

ಚಿಕ್ಕಮಗಳೂರು: ಹೆಣ ಹೊತ್ತುಕೊಂಡು ಹೋಗುವುದಕ್ಕೆ ದಾರಿ ಇಲ್ಲದೆ ಜೋಳಿಗೆಯಲ್ಲಿ ಹೆಣ ಮತ್ತು ರೋಗಿಯನ್ನು ಹೊತ್ತುಕೊಂಡು ಹೋಗಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನ ಸಂಸೆ ಸಮೀಪದ ಕೋಣೆಗೂಡು ಗ್ರಾಮದಲ್ಲಿ

ಕೋಣೆಗೂಡು ಗ್ರಾಮದ 19 ವರ್ಷದ ಯುವಕ ಅವಿನಾಶ್ ಅನಾರೋಗ್ಯದಿಂದ ಬಳಲುತ್ತಿದ್ದ. ಕೂಡಲೇ ಆತನನ್ನು ಜೋಳಿಗೆಯಲ್ಲಿ ಹೊತ್ತುಕೊಂಡು ಆಸ್ಪತ್ರೆಗೆ ಸಾಗಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದನು. ಮೃತದೇಹವನ್ನು ಮನೆಗೂ ತರೋಕೆ ಆಗದೆ ಕೋಣೆಗೂಡು ನಿವಾಸಿಗಳು ಮತ್ತದೇ ಜೋಳಿಗೆಯಲ್ಲಿ ಮೃತದೇಹ ಕಟ್ಟಿಕೊಂಡು ಮನೆಗೆ ಹೊತ್ತೊಯ್ದಿದ್ದಾರೆ.

ಈ ಗ್ರಾಮದ ಅಂಚಿಗೆ ಆಂಬುಲೆನ್ಸ್ ಬಂದರೂ ಕೂಡ ಸುಮಾರು 2 ಕಿ.ಮೀ. ದೂರದಲ್ಲೇ ನಿಲ್ಲುತ್ತೆ. ಆ ಎರಡು ಕಿ.ಮೀ. ದೂರ ಜೋಳಿಗೆಯಲ್ಲೇ ರೋಗಿಯನ್ನು ಹೊತ್ತು ತರಬೇಕು. ಮೃತದೇಹವನ್ನೂ ಅದೇ ರೀತಿ ಹೊತ್ತು ಸಾಗಬೇಕು. ಈ ಮಾರ್ಗದಲ್ಲಿನ ಭದ್ರಾ ನದಿಯ ಉಪನದಿಯ ಹಳ್ಳಕ್ಕೆ ಸ್ಥಳೀಯರೇ ಸಂಕ ನಿರ್ಮಿಸಿಕೊಂಡಿದ್ದು ಆ ಸಂಕದ ಮೇಲೆ ಸಾವಿನ ನಡೆಗೆ ನಡೆಯಬೇಕು. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದ್ರು ಕೂಡ ಯಾವುದೇ ಪ್ರಯೋಜನವಾಗಿಲ್ಲ.

ಕಳೆದ 2 ವರ್ಷಗಳಲ್ಲಿ ಇದೊಂದೇ ಗ್ರಾಮದಲ್ಲಿ ಮೂರು ಜನ ಸಾವನ್ನಪ್ಪಿದ್ದಾರೆ. ಆಗಲೂ ಕೂಡ ಈ ಕೋಣೆಗೂಡು ಗ್ರಾಮದ ಜನ ಇದೇ ರೀತಿ ಮೃತದೇಹವನ್ನ ಸಾಗಿಸಿದ್ದರು. ಗ್ರಾಮದಲ್ಲಿ ಯಾರಿಗಾದರೂ ಆರೋಗ್ಯ ಕೆಟ್ಟರೆ ಅವರನ್ನು ಆಸ್ಪತ್ರೆಗೆ ಸೇರಿಸಲು ಊರಿನ ಇಂದಿಗೂ ಪರದಾಡ್ತಿದ್ದಾರೆ. ಯಾರಿಗಾದರೂ ಆರೋಗ್ಯ ತುರ್ತಾಗಿ ಹದಗೆಟ್ಟು ತಕ್ಷಣ ಆಸ್ಪತ್ರೆಗೆ ಹೋಗಬೇಕು ಅಂದ್ರೆ ಊರಲ್ಲಿ ಜನ ಇದ್ರೆ ಮಾತ್ರ ಸಾಧ್ಯ. ಇಲ್ಲವಾದರೆ ಸಾವೇ ಗತಿ. 50ಕ್ಕೂ ಹೆಚ್ಚು ಕುಟುಂಬಗಳಿರೋ ಈ ಕೋಣೆಗೂಡು ಗ್ರಾಮದ ಜನ ಕಡೇ ಪಕ್ಷ ಜೀವ ಉಳಿಸಿಕೊಳ್ಳೋಕ್ಕಾದ್ರು ರಸ್ತೆ, ಸೇತುವೆ ನಿರ್ಮಿಸಿಕೊಡಿ ಎಂದು ದಶಕಗಳಿಂದ ಮನವಿ ಮಾಡ್ತಾನೆ ಇದ್ದಾರೆ.

Related Articles

Back to top button
error: Content is protected !!