ರಾಜಕೀಯ

ಯತ್ನಾಳ್ ಉಚ್ಛಾಟಿಸಿದ ಬೆನ್ನಲ್ಲೆ ಬಿಜೆಪಿಯ ಭಿನ್ನಮತೀಯರಿಂದ ಸಭೆ: ಮುಂದಿನ ನಡೆ ಬಗ್ಗೆ ಚರ್ಚೆ ಕುತೂಹಲ!

Views: 47

ಕನ್ನಡ ಕರಾವಳಿ ಸುದ್ದಿ: ಬಿಜೆಪಿ ಭಿನ್ನಮತೀಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟಿಸಿದ ಬೆನ್ನಲ್ಲೆ ಬಿಜೆಪಿಯ ಭಿನ್ನ ನಾಯಕರು ಇಂದು ಮತ್ತೆ ಸಭೆ ಸೇರಿ ತಮ್ಮ ಮುಂದಿನ ನಡೆ ಬಗ್ಗೆ ಚರ್ಚೆ ನಡೆಸಿದ್ದು, ಈ ಸಭೆಯಲ್ಲಿ ಬಿಜೆಪಿಯ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹ ಭಾಗಿಯಾಗಿರುವುದು ಕುತೂಹಲ ಮೂಡಿಸಿದೆ.

ಬಿಜೆಪಿಯ ಭಿನ್ನಮತೀಯ ಬಣದಲ್ಲಿ ಗುರುತಿಸಿಕೊಂಡಿರುವ ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ್ ಅವರ ಬೆಂಗಳೂರಿನ ಮನೆಯಲ್ಲಿ ಬಿಜೆಪಿಯ ಭಿನ್ನ ನಾಯಕರ ಸಭೆ ನಡೆದಿದೆ.

ಈ ಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟಿಸಿರುವ ಬಗ್ಗೆ ಚರ್ಚೆಗಳು ನಡೆದಿದ್ದು, ಮುಂದೆ ಭಿನ್ನ ನಾಯಕರು ಯಾವ ಹೆಜ್ಜೆ ಇಡಬೇಕು, ಪಕ್ಷದ ಹಿತದೃಷ್ಠಿಯಿಂದ ಯಾವ ತೀರ್ಮಾನಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆಗಳು ನಡೆದಿವೆ.

ಬಿಜೆಪಿಯಿಂದ ಉಚ್ಛಾಟಿಸಲಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರವರ ಉಚ್ಛಾಟನೆಯನ್ನು ವಾಪಸ್ ಪಡೆಯುವಂತೆ ವರಿಷ್ಠರನ್ನು ಭೇಟಿ ಮಾಡಿ ಮನವಿ ಮಾಡುವ ಬಗ್ಗೆಯೂ ಈ ಸಭೆಯಲ್ಲಿ ಚರ್ಚೆಗಳು ನಡೆದಿದ್ದು, ವರಿಷ್ಠರನ್ನು ಭೇಟಿ ಮಾಡಬೇಕೇ ಇಲ್ಲವೇ ಪತ್ರ ಮುಖೇನ ಮನವಿ ಮಾಡಬೇಕೇ ಎಂಬ ಬಗ್ಗೆಯೂ ಭಿನ್ನರು ಚರ್ಚೆ ನಡೆಸಿದ್ದಾರೆ.

ಯತ್ನಾಳ್ ಅವರ ಉಚ್ಛಾಟನೆಯನ್ನು ರದ್ದು ಮಾಡಲು ಸಂಘ ಪರಿವಾರದ ನಾಯಕರ ಮೂಲಕ ವರಿಷ್ಠರ ಮೇಲೆ ಒತ್ತಡ ಹೇರುವ ಬಗ್ಗೆಯೂ ಇಂದಿನ ಸಭೆಯಲ್ಲಿ ಚರ್ಚೆಗಳು ನಡೆದವು ಎಂದು ಹೇಳಲಾಗಿದೆ.

ಯುಗಾದಿ ಹಬ್ಬದ ನಂತರ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡುವ ಬಗ್ಗೆಯೂ ಈ ಸಭೆಯಲ್ಲಿ ತೀರ್ಮಾನಗಳನ್ನು ಮಾಡಲಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಅವರನ್ನು ಬಿಟ್ಟು ಬೇರೆಯವರನ್ನು ನೇಮಕ ಮಾಡಿ ಎಂಬ ತಮ್ಮ ಹಳೇ ಬೇಡಿಕೆಯನ್ನು ಮತ್ತೆ ವರಿಷ್ಠರ ಮುಂದೆ ಇಡುವ ಬಗ್ಗೆಯೂ ಚರ್ಚೆಗಳು ನಡೆದವು ಎಂದು ಹೇಳಲಾಗಿದೆ.

ಬಿಜೆಪಿಯಿಂದ ಉಚ್ಛಾಟನೆಯಾದ ಮೇಲೆ ಯಾರ ಕೈಗೂ ಸಿಗದೆ ಕಲ್ಬುರ್ಗಿಯ ಚಿಂಚೋಳಿಯಲ್ಲಿರುವ ಸಕ್ಕರೆ ಕಾರ್ಖಾನೆಯ ಅತಿಥಿ ಗೃಹದಲ್ಲಿ ಕಳೆದ 2 ದಿನಗಳಿಂದ ತಂಗಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದು ಹೈದರಾಬಾದ್‌ನಿಂದ ವಿಮಾನದ ಮೂಲಕ ಬೆಂಗಳೂರಿಗೆ ಬಂದು ಯು.ಬಿ. ಸಿಟಿಯಲ್ಲಿರುವ ಸಿದ್ದೇಶ್ವರ್ ರವರ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಭಿನ್ನರ ಸಭೆಯಲ್ಲಿ ಭಾಗಿಯಾಗಿರುವುದು ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ.

ಬಿಜೆಪಿಯಲ್ಲಿ ಭಿನ್ನಮತೀಯ ಚಟುವಟಿಕೆ ನಡೆಸಿದ್ದ ಯತ್ನಾಳ್ ಅವರನ್ನು ಉಚ್ಛಾಟಿಸಿದ ನಂತರವೂ ಭಿನ್ನರು ಸಭೆ ಸೇರಿರುವುದು ಮತ್ತು ಈ ಸಭೆಯಲ್ಲಿ ಉಚ್ಛಾಟಿತ ಯತ್ನಾಳ್ ಭಾಗಿಯಾಗಿರುವುದು ವಿಜಯೇಂದ್ರ ಪರ ಬೆಂಬಲಿಗರ ಅಸಮಾಧಾನಕ್ಕೂ ಕಾರಣವಾಗಿದ್ದು, ಇಂದಿನ ಸಭೆ ಬಗ್ಗೆ ಹೈಕಮಾಂಡ್‌ಗೆ ಮಾಹಿತಿಯನ್ನು ರವಾನಿಸಲಾಗಿದೆ.

ಇಷ್ಟೆಲ್ಲಾ ಬೆಳವಣಿಗೆಗಳಾಗಿದ್ದರೂ ಭಿನ್ನ ನಾಯಕರುಗಳು ಮಾತ್ರ ತಮ್ಮ ಪಟ್ಟು ಸಡಿಲಿಸುತ್ತಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಬಿಜೆಪಿಯ ಆಂತರಿಕ ಸಂಘರ್ಷ ಮತ್ತಷ್ಟು ಬಿರುಸಾಗುವ ಸಾಧ್ಯತೆಗಳನ್ನು ತಳ್ಳಿ ಹಾಕಲಾಗದು.

ಇಂದಿನ ಸಭೆಯಲ್ಲಿ ಮಾಜಿ ಕೇಂದ್ರ ಸಚಿವ ಜಿ.ಎಂ. ಸಿದ್ದೇಶ್ವರ್, ಶಾಸಕರಾದ ರಮೇಶ್ ಜಾರಕಿಹೊಳಿ, ಬಿ.ಪಿ. ಹರೀಶ್, ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ, ಎನ್.ಆರ್. ಸಂತೋಷ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.

Related Articles

Back to top button