ಇತರೆ

ಆನ್‌ಲೈನ್ ಬೆಟ್ಟಿಂಗ್‌ಗೆ ಲಕ್ಷಾಂತರ ರೂಪಾಯಿ ವಂಚನೆ: ಐವರನ್ನು ಬಂಧಿಸಿದ ಕೋಟ ಪೊಲೀಸರು 

Views: 45

ಕನ್ನಡ ಕರಾವಳಿ ಸುದ್ದಿ: ಆನ್‌ಲೈನ್ ಬೆಟ್ಟಿಂಗ್‌ಗೆ ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಕೋಟ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳನ್ನು ಶಿರಿಯಾರ ಗ್ರಾಮದ ಎತ್ತಿನಟ್ಟಿ ನಿವಾಸಿಗಳಾದ ರೂಪೇಶ್ (23), ಮನೋಜ್ (25), ಸೃಜನ್ ಶೆಟ್ಟಿ (28), ರಾಘವೇಂದ್ರ (37), ಶಿರಿಯಾರ ನಿವಾಸಿ ಕುಶಲ (38)ಎಂದು ಗುರುತಿಸಲಾಗಿದೆ.

ದೂರುದಾರ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ಆತನಿಗೆ ಸುಮಾರು ಒಂದು ವರ್ಷದ ಹಿಂದೆ ಶಿರಿಯಾರ ನಿವಾಸಿ ಪ್ರದೀಪ್ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ಆತ ‘ಪಾರ್ಕರ್’ ಎಂಬ ಅಪ್ಲಿಕೇಶನ್ ಮೂಲಕ ಆನ್‌ಲೈನ್ ಬೆಟ್ಟಿಂಗ್ ನಡೆಸುತ್ತಿದ್ದು, ಹೆಚ್ಚು ಲಾಭ ಸಿಗುತ್ತದೆ ಎಂದು ಪ್ರಚೋದಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರದೀಪ್ ಪರಿಚಯಿಸಿದ ತಂಡದ ಸದಸ್ಯರಾದ ರೂಪೇಶ್, ಮನೋಜ್, ಧೀರಜ್ ಮೊದಲಾದವರು ವಾಟ್ಸಪ್ ಮೂಲಕ ಕಳುಹಿಸಿದ ಅಪ್ಲಿಕೇಶನ್ ಲಿಂಕ್, ಐಡಿ ಹಾಗೂ ಪಾಸ್‌ವರ್ಡ್ ಬಳಸಿ ದೂರುದಾರ ಬೆಟ್ಟಿಂಗ್ ಆಡಿದ್ದಾರೆ.

ಬೆಟ್ಟಿಂಗ್‌ಗೆ ಅಗತ್ಯವಿದ್ದ ಹಣವನ್ನು ಪ್ರದೀಪ್ ಸೂಚನೆಯಂತೆ ರೂಪೇಶ್, ಮನೋಜ್, ಧೀರಜ್, ಹರೀಶ, ವಿದೇಶ್ ಸೇರಿದಂತೆ ಇತರರ ಮೊಬೈಲ್ ಸಂಖ್ಯೆಗಳ ಮೂಲಕ ಫೋನ್‌ಪೇ, ಗೂಗಲ್‌ಪೇ ಮೂಲಕ ವರ್ಗಾವಣೆ ಮಾಡಲಾಗಿದೆ.

ದೂರುದಾರ ಸುಮಾರು 25 ಲಕ್ಷ ರೂ. ಹಣವನ್ನು ಸಾಲ ಮಾಡಿ ಹೂಡಿಕೆ ಮಾಡಿದ್ದು, ಬೆಟ್ಟಿಂಗ್‌ನಲ್ಲಿ 15 ಲಕ್ಷ ರೂ. ಗೆದ್ದರೂ ಆ ಹಣವನ್ನು ಆರೋಪಿಗಳು ವಾಪಸ್ಸು ನೀಡದೆ ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರದೀಪ್ ಸಂಘಟಿತ ತಂಡ ರಚಿಸಿಕೊಂಡು ಶಿರಿಯಾರ ಸೈಬ್ರಕಟ್ಟೆ, ಹಳ್ಳಾಡಿ, ಕೋಟಾ, ಬ್ರಹ್ಮಾವರ ಹಾಗೂ ಕುಂದಾಪುರ ಸುತ್ತಮುತ್ತ ಆನ್‌ಲೈನ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದು, ಅನೇಕ ಯುವಕರಿಗೆ ವಂಚನೆ ಮಾಡಿರುವ ಆರೋಪವೂ ಇದೆ.

ಅಕ್ರಮವಾಗಿ ಸಂಪಾದಿಸಿದ ಹಣವನ್ನು ನಗದು ರೂಪದಲ್ಲಿ ಇತರರ ಹೆಸರಿನಲ್ಲಿ ಸೊಸೈಟಿಗಳಲ್ಲಿ ಠೇವಣಿ ಇಡಲಾಗುತ್ತಿತ್ತು ಎಂಬುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸುಮಾರು ತಿಂಗಳ ಹಿಂದೆ ಶಿರಿಯಾರದಲ್ಲಿ ಪ್ರದೀಪ್ ಅವರನ್ನು ಭೇಟಿಯಾಗಿ ಗೆದ್ದ ₹15 ಲಕ್ಷ ರೂ.ಹಣ ವಾಪಸ್ಸು ಕೇಳಿದಾಗ, ಆರೋಪಿಗಳು ಹಣ ನೀಡಲು ನಿರಾಕರಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಸಾಲಗಾರರ ಒತ್ತಡದಿಂದ ದೂರುದಾರ ಆತ್ಮಹತ್ಯೆಗೆ ಯತ್ನಿಸುವ ಹಂತಕ್ಕೆ ತಲುಪಿದ್ದರು ಎನ್ನಲಾಗಿದೆ.

ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದೀಗ ಕೋಟ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Related Articles

Back to top button
error: Content is protected !!