ಮಹಿಳಾ ಇನ್ಫ್ಲುಯೆನ್ಸರ್‌ಗೆ ಲೈಂಗಿಕ ಕಿರುಕುಳ; ಆರೋಪಿ ಅರೆಸ್ಟ್
Views: 67
ಕನ್ನಡ ಕರಾವಳಿ ಸುದ್ದಿ: ಸಿಲಿಕಾನ್ ಸಿಟಿ ಬೆಂಗಳೂರು ಮೂಲದ 34 ವರ್ಷದ ಇನ್ಫ್ಲುಯೆನ್ಸರ್ ಮಹಿಳೆಯೊಬ್ಬರು ಹರಿಯಾಣದ ವ್ಯಕ್ತಿಯೊಬ್ಬರ ವಿರುದ್ಧ ಹಿಂಸೆ ಮತ್ತು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.
ಮಹಿಳೆ ಕೂಡ ಹರಿಯಾಣ ಮೂಲದವರಾಗಿದ್ದು, ಕಳೆದ 15 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಆರೋಪಿಯು ಸುಮಾರು ಒಂದು ವರ್ಷದಿಂದ ತನ್ನನ್ನು ಹಿಂಬಾಲಿಸುತ್ತಿದ್ದಾನೆ ಮತ್ತು ಕಿರುಕುಳ ನೀಡುತ್ತಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.
ದೂರಿನ ಪ್ರಕಾರ, ಸುಧೀರ್ ಕುಮಾರ್ ಎಂದು ಗುರುತಿಸಲಾದ ಆರೋಪಿಯು 2025ರ ಮಾರ್ಚ್‌ನಿಂದ ಫಿಟ್‌ನೆಸ್ ಪ್ರಭಾವಿ ಮತ್ತು ಪೌಷ್ಟಿಕ ತಜ್ಞೆಯಾಗಿರುವ ಮಹಿಳೆಗೆ ಕಿರುಕುಳ ನೀಡುತ್ತಿದ್ದಾನೆ. ಮೇ 10ರಂದು ಸುಧೀರ್, ಹರಿಯಾಣದ ರೇವಾರಿಯಲ್ಲಿರುವ ಮಹಿಳೆಯ ಕುಟುಂಬದ ಮನೆಗೆ ಭೇಟಿ ನೀಡಿ ಅಶಿಸ್ತಿನ ವರ್ತನೆ ತೋರಿದ್ದಾನೆ.
ಯಾವುದೇ ಸಂಪರ್ಕವನ್ನು ಇಟ್ಟುಕೊಳ್ಳದಂತೆ ಎಚ್ಚರಿಕೆ ನೀಡಿದ್ದರೂ, ಸುಧೀರ್ ಮಹಿಳೆಗೆ ವಾಟ್ಸಾಪ್‌ನಲ್ಲಿ ಹಲವಾರು ನಿಂದನೀಯ ಮತ್ತು ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಾನೆ ಎಂದು ಆರೋಪಿಸಲಾಗಿದೆ. ಒಂದು ವಾಟ್ಸ್‌ಆ್ಯಪ್ ಮೆಸೇಜ್‌ನಲ್ಲಿ ಬೆಂಗಳೂರಿಗೆ ತೆರಳಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುವುದಾಗಿ ಬೆದರಿಕೆ ಹಾಕಿದ್ದಾನೆ. ಮತ್ತೊಂದು ಸಂದೇಶದಲ್ಲಿ, ಆ ವ್ಯಕ್ತಿ ತಾನು ಆಕೆಯನ್ನು ಹೇಗೆ ನಿಂದಿಸಲು ಉದ್ದೇಶಿಸಿದ್ದೇನೆಂದು ವಿವರಿಸಿದ್ದಾನೆ.
2025ರ ಅಕ್ಟೋಬರ್ 24 ಮತ್ತು ಡಿಸೆಂಬರ್ 20ರ ನಡುವೆ ಆ ವ್ಯಕ್ತಿ ಇನ್‌ಸ್ಟಾಗ್ರಾಮ್‌ನಲ್ಲಿ ಹಲವು ಲೈಂಗಿಕ ಮತ್ತು ಪ್ರಚೋದನಕಾರಿ ಸಂದೇಶಗಳನ್ನು ಕಳುಹಿಸಿದ್ದಾನೆ. ಬ್ಲಾಕ್ ಮಾಡಿದ ನಂತರವೂ, ಆರೋಪಿಯು ವಿವಿಧ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಮಹಿಳೆಯನ್ನು ಸಂಪರ್ಕಿಸುವುದನ್ನು ಮುಂದುವರಿಸಿದ್ದಾನೆ. ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ ಮತ್ತು ಲೈಂಗಿಕ ಕಿರುಕುಳದ ಹೇಳಿಕೆಗಳನ್ನು ನೀಡುತ್ತಿದ್ದ.
ಎಫ್‌ಐಆರ್ ಪ್ರಕಾರ, ಆರೋಪಿಯು ಜನವರಿ 12ರಂದು ಮಹಿಳೆಯ ಜಿಮ್‌ಗೆ ಭೇಟಿ ನೀಡಿ ಆಕೆಯ ಬಗ್ಗೆ ವಿಚಾರಿಸಿದ್ದಾನೆ ಎಂದು ವರದಿಯಾಗಿದೆ. ಬೆಂಗಳೂರು ಪೊಲೀಸರು ಸುಧೀರ್ ಕುಮಾರ್ ವಿರುದ್ಧ ಲೈಂಗಿಕ ಕಿರುಕುಳ, ಮಹಿಳೆಯೊಬ್ಬರ ಮೇಲೆ ಹಲ್ಲೆ ಮತ್ತು ಅವಮಾನ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.






