ಮಹಾರಾಷ್ಟ್ರ ಚುನಾವಣೆ:ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬಾಳಾಸಾಹೇಬ್ ಶಿಂಧೆ ಮತಗಟ್ಟೆಯಲ್ಲಿಯೇ ನಿಧನ
Views: 101
ಕನ್ನಡ ಕರಾವಳಿ ಸುದ್ದಿ: ಮಹಾರಾಷ್ಟ್ರದ ಬೀಡ್ ವಿಧಾನಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಬಾಳಾಸಾಹೇಬ್ ಶಿಂಧೆ ಮತಗಟ್ಟೆಯಲ್ಲಿಯೇ ಇಂದು ನಿಧನರಾದರು.
ಚುನಾವಣಾ ಆಯೋಗದ ಪ್ರಕಾರ, ಬಾಳಾ ಸಾಹೇಬ್ ಬೀಡ್ ನಗರದ ಛತ್ರಪತಿ ಶಾಹು ವಿದ್ಯಾಲಯದ ಮತಗಟ್ಟೆಯಲ್ಲಿದ್ದಾಗ ಎದೆನೋವಾಗುತ್ತೆ ಅಂತ ಹೇಳಿದ್ದಾರೆ. ಕೂಡಲೇ ಅವರಿಗೆ ನೀರನ್ನು ನೀಡಲಾಯಿತು. ಬಳಿಕ ಜನಸಂದಣಿಯಿಂದ ಗಾಳಿಯಿರುವ ಸ್ಥಳಕ್ಕೆ ಕರೆದೊಯ್ಯುತ್ತಿದ್ದಾಗ ಅವರು ಕುಸಿದರು. ಘಟನೆ ನಂತರ ಮತಗಟ್ಟೆ ಕೇಂದ್ರದಲ್ಲಿ ಗದ್ದಲ ಉಂಟಾಗಿದ್ದು, ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣ ಆಯಿತು. ಇತ್ತ ಬಾಳಾ ಸಾಹೇಬ್ ಶಿಂಧೆ ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅಲ್ಲಿ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.
ಈ ಸಂಬಂಧ ಮತದಾನ ಕೇಂದ್ರದ ಹೊರಗೆ ಹಾಜರಿದ್ದ ಬೆಂಬಲಿಗರು ಪ್ರತಿಕ್ರಿಯಿಸಿ, ಬಾಳಾ ಸಾಹೇಬರು ತಲೆ ಸುತ್ತಿ ಬಿದ್ದಿದ್ದಾರೆ. ನಂತರ ಅವರನ್ನು ಕಾಕು ನಾನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿಂದ ಅವರನ್ನು ಛತ್ರಪತಿ ಸಂಭಾಜಿ ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ವೇಳೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಹೃದಯಾಘಾತವೇ ಸಾವಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಬೀಡು ವಿಧಾನಸಭಾ ಕ್ಷೇತ್ರದಲ್ಲಿ ಬಾಳಾಸಾಹೇಬ ಶಿಂಧೆ ಅವರ ಪ್ರಭಾವ ಹೆಚ್ಚಿತ್ತು. ಸದ್ಯ ಮತದಾನದ ನಡುವೆಯೇ ಬಾಳಾಸಾಹೇಬ್ ಶಿಂಧೆ ನಿಧನದಿಂದ ಬೀಡ್ ನಗರ ಸೇರಿದಂತೆ ಇಡೀ ಜಿಲ್ಲೆಯಲ್ಲಿ ಶೋಕದ ಅಲೆ ಎದ್ದಿದೆ.