ಮಂಗಳೂರು: 8 ವರ್ಷದ ಬಾಲಕಿಯನ್ನು ರೇಪ್ ಮಾಡಿ, ಕತ್ತು ಹಿಸುಕಿ ಕೊಲೆ ಪ್ರಕರಣ: ಮೂವರಿಗೆ ಮರಣ ದಂಡನೆ
Views: 312
ಮಂಗಳೂರು: 2021ರಲ್ಲಿ 8 ವರ್ಷದ ಬಾಲಕಿಯನ್ನು ಅತ್ಯಾಚಾರ ನಡೆಸಿ, ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್ಟಿಎಸ್ಸಿ-2 ಪೋಕ್ಸೋ ವಿಶೇಷ ನ್ಯಾಯಾಲಯ ಮರಣದಂಡನೆ ವಿಧಿಸಿ, 1,20,000 ರೂ. ದಂಡ ವಿಧಿಸಿ ಆದೇಶಿಸಿದೆ.
ಮಧ್ಯಪ್ರದೇಶ ಮೂಲದ ಜಯಸಿಂಗ್ (21), ಮುಖೇಶ್ ಸಿಂಗ್ (20), ಜಾರ್ಖಂಡ್ ಮೂಲದ ಮನೀಷ್ ತಿರ್ಕಿ(33) ಮರಣದಂಡನೆಗೆ ಒಳಗಾದ ಆರೋಪಿಗಳು.
ಇವರು ಮಂಗಳೂರಿನ ಹೊರವಲಯದ ಫ್ಯಾಕ್ಟರಿಯೊಂದರಲ್ಲಿ ಕಾರ್ಮಿಕರಾಗಿದ್ದರು. 2021ರ ನವೆಂಬರ್ 21ರಂದು ಫ್ಯಾಕ್ಟರಿಗೆ ರಜೆಯಿತ್ತು. ಹೀಗಾಗಿ ಕಾರ್ಮಿಕರು ಯಾರೂ ಇರಲಿಲ್ಲ. ಇದೇ ಸಮಯ ಬಳಸಿಕೊಂಡು 8 ವರ್ಷದ ಬಾಲಕಿ ಮೇಲೆ ಮೂವರು ಅತ್ಯಾಚಾರ ನಡೆಸಿದ್ದರು. ಬಾಲಕಿ ನೋವಿನಿಂದ ಚೀರಾಡಿದಾಗ ಜಯಸಿಂಗ್ ಒಂದು ಕೈಯಿಂದ ಬಾಲಕಿಯ ಬಾಯನ್ನು ಮುಚ್ಚಿ, ಮತ್ತೊಂದು ಕೈಯಿಂದ ಕುತ್ತಿಗೆ ಹಿಸುಕಿದ್ದಾನೆ. ಪರಿಣಾಮ ಆಕೆ ಅಲ್ಲಿಯೇ ಮೃತಪಟ್ಟಿದ್ದಳು.
ಬಳಿಕ ಬಾಲಕಿಯ ಮೃತದೇಹವನ್ನು ಅಲ್ಲಿಯೇ ಇದ್ದ ಕಲ್ಲುಚಪ್ಪಡಿ ಹಾಸಿರುವ ತೋಡಿನಲ್ಲಿ ಇಟ್ಟಿದ್ದರು. ಬಾಲಕಿ ಕಾಣದಿದ್ದಾಗ ಆಕೆಯ ಹೆತ್ತವರು ಹುಡುಕಾಟ ನಡೆಸಿದ ವೇಳೆ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಈ ವೇಳೆ ಕೃತ್ಯ ಎಸಗಿದ ಮೂವರು ಹಾಗೂ ಅವರಿಗೆ ಸಹಕರಿಸಿದ ನಾಲ್ಕನೇ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ಮೃತ ಬಾಲಕಿಯ ತಾಯಿ ನೀಡಿರುವ ದೂರಿನಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿ, ಪೋಕ್ಸೋ ಹಾಗೂ ಕೊಲೆ ಪ್ರಕರಣದಲ್ಲಿ ಕೇಸು ದಾಖಲಿಸಿದ್ದರು.
ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸ್ ನಿರೀಕ್ಷಕ ಜಾನ್ಸನ್ ಡಿಸೋಜ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣವನ್ನು ಕೈಗೆತ್ತಿಕೊಂಡ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್ಟಿಎಸ್ಸಿ-2 ಫೋಕ್ಸೋ ವಿಶೇಷ ನ್ಯಾಯಾಲಯವು 30 ಸಾಕ್ಷಿಗಳನ್ನು ವಿಚಾರಣೆ ನಡೆಸಿ, 74 ದಾಖಲೆಗಳನ್ನು ಹಾಗೂ ಸ್ಥಳದಲ್ಲಿ ಸಿಕ್ಕ 45 ಪರಿಕರಗಳನ್ನು ಗುರುತಿಸಿತ್ತು.
ಪ್ರಕರಣದ ಸಾಕ್ಷ್ಯ, ದಾಖಲೆಗಳು, ಪೂರಕ ಸಾಕ್ಷ್ಯ, ವೈಜ್ಞಾನಿಕ ವರದಿ ಹಾಗೂ ವಾದ-ವಿವಾದಗಳನ್ನು ಆಲಿಸಿ ಆರೋಪ ಸಾಬೀತಾದ ಹಿನ್ನೆಲೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ. ಎಸ್ ಮಾನು ಮೂವರು ಆರೋಪಿಗಳಿಗೆ ಮರಣದಂಡನೆ ಹಾಗೂ 1.20 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.
ಅಲ್ಲದೇ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಬಾಲಕಿಯ ಹೆತ್ತವರಿಗೆ ಪರಿಹಾರ ಯೋಜನೆಯಡಿ 3.80 ಲಕ್ಷ ಪರಿಹಾರ ನೀಡಬೇಕೆಂದು ಆದೇಶಿಸಿದ್ದಾರೆ. ಸರ್ಕಾರಿ ವಿಶೇಷ ಅಭಿಯೋಜಕ ಕೆ. ಬದರಿನಾಥ ನಾಯಿರಿ ವಾದ ಮಂಡಿಸಿದ್ದರು.