ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ: ಕೋಟ್ಯಾಂತರ ರೂ. ಮೌಲ್ಯದ ಆಸ್ತಿಪಾಸ್ತಿ ಪತ್ತೆ!

Views: 88
ಬೆಂಗಳೂರು: ಲೋಕಾಯುಕ್ತರು ಇಂದು ಬೆಳ್ಳಂಬೆಳಿಗ್ಗೆಯೇ 11 ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ಭ್ರಷ್ಟ ಅಧಿಕಾರಿಗಳು ಸಂಪಾದಿಸಿದ್ದ ಕೋಟ್ಯಾಂತರ ರೂ. ಮೌಲ್ಯದ ಆಸ್ತಿಪಾಸ್ತಿಯನ್ನು ಪತ್ತೆ ಹಚ್ಚಿದ್ದಾರೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ರಾಜ್ಯಸರ್ಕಾರದ ವಿವಿಧ ಇಲಾಖೆಗಳ 11 ಅಧಿಕಾರಿಗಳು ಹಾಗೂ ಇಬ್ಬರು ನಿವೃತ್ತ ಇಂಜಿನಿಯರ್ಗಳಿಗೆ ಸಂಬಂಧಿಸಿದ ಒಟ್ಟಾರೆ 56 ಸ್ಥಳಗಳ ಮೇಲೆ ಇಂದು ಬೆಳ್ಳಂಬೆಳಿಗ್ಗೆ ದಾಳಿ ಮಾಡಿ ಅಪಾರ ಪ್ರಮಾಣದ ಅಕ್ರಮ ಆಸ್ತಿಪಾಸ್ತಿ ಪತ್ತೆ ಹಚ್ಚಿದ್ದಾರೆ.
ಲೋಕಾಯುಕ್ತ ಪೊಲೀಸ್ ವಿಭಾಗದ ಎಸ್ಪಿಗಳೂ ಸೇರಿದಂತೆ 100 ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಭ್ರಷ್ಟರ ಸಂಪತ್ತನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.ಕಲಬುರಗಿ, ಮೈಸೂರು, ದಾವಣಗೆರೆ, ಚಿತ್ರದುರ್ಗ, ಧಾರವಾಡ, ಬೆಳಗಾವಿ ಸೇರಿ 9 ಜಿಲ್ಲೆಗಳ 56 ಕಡೆಗಳಲ್ಲಿ ದಾಳಿ ನಡೆಸಿ,ಭ್ರಷ್ಟ ಅಧಿಕಾರಿ ಹಾಗೂ ನಿವೃತ್ತ ಅಧಿಕಾರಿಗಳನ್ನು ಬಲೆಗೆ ಕೆಡವಿ ಅಕ್ರಮ ಆಸ್ತಿಪಾಸ್ತಿಯ ದಾಖಲೆಗಳ ಪತ್ರಗಳ ಪರಿಶೀಲನೆ ಕೈಗೊಂಡಿದ್ದಾರೆ.
ಕೋಲಾರದ ತಹಶೀಲ್ದಾರ್ ವಿಜಯಣ್ಣ, ಸಣ್ಣ ನೀರಾವರಿ ಇಲಾಖೆಯ ನಿವೃತ್ತ ಮುಖ್ಯ ಎಂಜಿನಿಯರ್ ಎಂ.ರವೀಂದ್ರ, ಜಲ ಸಂಪನ್ಮೂಲ ಇಲಾಖೆಯ ಮೈಸೂರು ಸೂಪರಿಂಟೆಂಡಿಂಗ್ ಎಂಜಿನಿಯರ್ ಮಹೇಶ್ ಕೆ., ಲೋಕೋಪಯೋಗಿ ಇಲಾಖೆಯ ಸೂಪರಿಂಟೆಂಡಿಂಗ್ ಎಂಜಿನಿಯರ್ ಕೆ.ಜಿ. ಜಗದೀಶ್, ಧಾರವಾಡ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶೇಖರ್ ಗೌಡ, ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆಯ ನಿವೃತ್ತ ಕಾರ್ಯನಿರ್ವಾಹಕ ಎಂಜಿನಿಯರ್ ಶಿವರಾಜು ಎಸ್., ಬಿಬಿಎಂಪಿ ಕೆಂಗೇರಿ ವಲಯದ ಕಂದಾಯ ಅಧಿಕಾರಿ ಬಸವರಾಜ ಮಾಗಿ, ದಾವಣಗೆರೆಯ ಕಾರ್ಯನಿರ್ವಾಹಕ ಎಂಜಿನಿಯರ್ ಡಿ.ಎಚ್. ಉಮೇಶ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಎಸ್, ಪ್ರಭಾಕರ, ಬೆಳಗಾವಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಹದೇವ್ ಬೆನ್ನೂರು, ಹಾಸನದ ಗ್ರಾಮ ಪಂಚಾಯಿತಿಯೊಂದರ ಗ್ರೇಡ್-1 ಕಾರ್ಯದರ್ಶಿ ಎನ್.ಎಂ. ಜಗದೀಶ್ ಅವರನ್ನು ಬಲೆಗೆ ಕೆಡವಿ ಅವರುಗಳ ಕಚೇರಿ, ಮನೆ, ಸಂಬಂಧಿಸಿದವರ ಮನೆಗಳು, ಇತರ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ.ಧಾರವಾಡದಲ್ಲಿ ಎರಡು ಕಡೆ ಪಿಜಿಗಳನ್ನು ಹೊಂದಿರುವ ಬೆಳಗಾವಿ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಶೇಖರಗೌಡ ಮನೆ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.ಧಾರವಾಡದಕೆಸಿಡಿ ರಸ್ತೆಯ ಸಪ್ತಾಪುರ ಹಾಗೂ ರಾಧಾಕೃಷ್ಣ ನಗರದಲ್ಲಿ ಶೇಖರಗೌಡರ ಪಿಜಿಗಳಿದ್ದು, ಎರಡೂ ಸ್ಥಳಗಳಲ್ಲೂ ಏಕಕಾಲಕ್ಕೆ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.






