ಬಿಜೆಪಿ ಹೈಕಮಾಂಡ್ ಶೋಕಾಸ್ ನೋಟಿಸ್ ಜಾರಿ ಬೆನ್ನಲ್ಲೇ ಯತ್ನಾಳ್ ಸಭೆ
Views: 118
ಕನ್ನಡ ಕರಾವಳಿ ಸುದ್ದಿ: ಬಿಜೆಪಿಯ ರಾಜ್ಯ ನಾಯಕತ್ವದ ವಿರುದ್ಧ ಟೀಕೆಗಳನ್ನು ಮಾಡುತ್ತಿರುವ ಬಿಜೆಪಿ ಭಿನ್ನರ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿ ಹೈಕಮಾಂಡ್ ಶೋಕಾಸ್ ನೋಟಿಸ್ ಜಾರಿ ಮಾಡಿದ ನಂತರವೂ ಭಿನ್ನ ನಾಯಕರುಗಳು ಸಭೆ ನಡೆಸಿ ಮುಂದಿನ ಆಗು-ಹೋಗುಗಳ ಬಗ್ಗೆ ಚರ್ಚಿಸಿದರು.
ವಕ್ಫ್ ವಿರುದ್ಧ ಕರ್ನಾಟಕದಲ್ಲಿ ಪ್ರತ್ಯೇಕ ಅಭಿಯಾನ ನಡೆಸಿ ವಕ್ಫ್‌ಗೆ ಸಂಬಂಧಿಸಿದಂತೆ ರಚಿಸಲಾಗಿರುವ ಸಂಸದೀಯ ಸಮಿತಿಯ ಅಧ್ಯಕ್ಷರಾದ ಜಗದಾಂಬಿಕ ಪಾಲ್ ರವರನ್ನು ಭೇಟಿ ಮಾಡಿ ವರದಿ ನೀಡಲು ದೆಹಲಿಗೆ ತೆರಳಿರುವ ಬಿಜೆಪಿಯ ಭಿನ್ನರು ಇಂದು ಬೆಳಿಗ್ಗೆ ಕರ್ನಾಟಕ ಭವನದಲ್ಲಿ ಸಭೆ ನಡೆಸಿದರು.
ಬಿಜೆಪಿಯ ಭಿನ್ನ ನಾಯಕ ಯತ್ನಾಳ್ ರವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ 10 ದಿನಗಳ ಒಳಗೆ ಉತ್ತರ ನೀಡುವಂತೆ ಬಿಜೆಪಿ ಕೇಂದ್ರ ಸಮಿತಿ ಸೂಚನೆ ನೀಡಿದ್ದರೂ ಯಾವುದನ್ನು ಲೆಕ್ಕಿಸದ ಭಿನ್ನ ನಾಯಕರು ಇಂದು ದೆಹಲಿಯಲ್ಲೇ ಸಭೆ ನಡೆಸಿದ್ದು ವಿಶೇಷವಾಗಿತ್ತು.
ವರಿಷ್ಠರು ನೀಡಿರುವ ನೋಟಿಸ್‌ಗೆ ಯಾವ ರೀತಿ ಉತ್ತರ ನೀಡಬೇಕು, ವರಿಷ್ಠರಿಗೆ ರಾಜ್ಯ ಬಿಜೆಪಿಯಲ್ಲಿ ನಡೆದಿರುವ ಬೆಳವಣಿಗೆಗಳ ಬಗ್ಗೆ ಯಾವ ಅಂಶಗಳನ್ನು ಅವರ ಗಮನಕ್ಕೆ ತರಬೇಕು ಎಂಬೆಲ್ಲಾ ವಿಚಾರವಾಗಿ ಈ ನಾಯಕರುಗಳು ಚರ್ಚೆ ನಡೆಸಿದರು ಎನ್ನಲಾಗಿದೆ.
ಬಿಜೆಪಿಯ ಭಿನ್ನ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಶಾಸಕ ಬಿ.ಪಿ. ಹರೀಶ್, ಮಾಜಿ ಸಂಸದ ಬಿ.ವಿ. ನಾಯಕ್, ಮುಖ್ಯಮಂತ್ರಿಗಳ ಮಾಜಿ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್, ಮುಖಂಡರಾದ ರವಿ ಬಿರದಾರ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.