ರಾಜಕೀಯ

ಬಿಜೆಪಿಯಲ್ಲಿ ಭುಗಿಲೆದ್ದ ಬಣ ರಾಜಕೀಯ:ಒಗ್ಗಟ್ಟಿನ ಹೋರಾಟ ಇಲ್ಲ..  ನಾನೊಂದು ತೀರ.. ನೀನೊಂದು ತೀರ..!

Views: 97

ಕನ್ನಡ ಕರಾವಳಿ ಸುದ್ದಿ: ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವಂತಾಗಿದ್ದು ರಾಜ್ಯ ಸರಕಾರದ ವಿರುದ್ಧದ ಹೋರಾಟದಲ್ಲೂ ಒಂಥರಾ ಮಂಕು ಕವಿದಂತಿದೆ. ಅಲ್ಲದೆ ಹೊಂದಾಣಿಕೆ ಇನ್ನೂ ಮುಂದುವರೆದಿದೆ ಎನ್ನುವುದು ಈಗ ಪಕ್ಷದೊಳಗೆ ಗುಟ್ಟಾಗಿ ಉಳಿದಿಲ್ಲ.

ಇದೇ ವೇಳೆ ಮದ್ದೂರು ಗಲಭೆಯಲ್ಲಿ ಬಿಜೆಪಿಯ ನಾಯಕರಿಗಿಂತ ಉಚ್ಛಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕೋಟೆಯಲ್ಲಿ ಭರ್ಜರಿ ಸ್ವಾಗತ ಸಿಕ್ಕಿರುವುದು ಬಿಜೆಪಿಯಲ್ಲಿ ತಳಮಳ ಆರಂಭವಾಗಿದೆ.

ರಾಜ್ಯ ಬಿಜೆಪಿಯೊಳಗಿನ ಗುಂಪುಗಾರಿಕೆ ಇನ್ನೂ ಇದೆ. ಇದರಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಣ, ತಟಸ್ಥರ ಬಣ, ಅತೃಪ್ತರ ಬಣ, ಪ್ರತಿಪಕ್ಷ ನಾಯಕ ಅಶೋಕ ಬಣದ ಜತೆಗೆ ಮತ್ತೊಂದು ಬೆಂಗಳೂರು ಬಣಗಳಾಗಿ ವಿಂಗಡಣೆಯಾಗಿ ಪಕ್ಷದಲ್ಲಿ ಒಗ್ಗಟ್ಟು ಕಾಣಿಸಿಕೊಳ್ಳದೆ, ಕಾಂಗ್ರೆಸ್ ಸರಕಾರದ ವಿರುದ್ಧ ಯಾವುದೇ ಸಂಘಟಿತ ಹೋರಾಟ ಕಾಣುತ್ತಿಲ್ಲ. ಮಾತ್ರವಲ್ಲದೇ, ಯಾವ ಹೋರಾಟಕ್ಕೂ ತಾರ್ಕಿಕ ಅಂತ್ಯ ಸಿಗುತ್ತಿಲ್ಲ ಎಂಬ ಮಾತುಗಳು ಆ ಪಕ್ಷದ ಕಾರ್ಯಕರ್ತರಲ್ಲೇ ಗಂಭೀರ ಚರ್ಚೆಗಳು ನಡೆಯುತ್ತಿದೆ.

ಗಣೇಶೋತ್ಸವ ಸಮಯದಲ್ಲಿ ಉಂಟಾದ ಕೋಮು ಗಲಭೆಯ ಲಾಭ ಪಡೆಯಲು ರಾಜ್ಯ ಬಿಜೆಪಿ ಪಡೆಯಲು ಪ್ರಯತ್ನಿಸಿತು. ಆದರೆ ಅಲ್ಲೂ ಕೂಡ ಪಕ್ಷದ ನಾಯಕರಲ್ಲಿ ಒಗ್ಗಟ್ಟು ಕಾಣಿಸಿಕೊಳ್ಳದೆ ಮದ್ದೂರಿನ ಹೋರಾಟದಲ್ಲಿ ಹಿನ್ನಡೆ ಉಂಟಾಯಿತು. ಬಿಜೆಪಿಯ ಪ್ರಮುಖ ನಾಯಕರಲ್ಲಿ ಒಗ್ಗಟ್ಟು ಇಲ್ಲ ಎನ್ನುವುದು ಅವರ ನಡೆಗಳಿಂದಲೇ ಎದ್ದು ಕಾಣುತ್ತಿತ್ತು. ಒಂದೆಡೆ ಮದ್ದೂರಿನಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಬರಲಿಲ್ಲ, ಅತ್ತ ವೇದಿಕೆಗೆ ವಿಪಕ್ಷ ನಾಯಕ ಆರ್.ಅಶೋಕ ಬರುತ್ತಿದ್ದಂತೆ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ನಿರ್ಗಮಿಸಿದ್ದರು.

ಮತ್ತೊಂದೆಡೆ ಅಶ್ವತ್ಥ್ ನಾರಾಯಣ್ ಮೆರವಣಿಗೆಯಲ್ಲಿ ಬರುತ್ತಿದ್ದಾಗಲೇ ವೇದಿಕೆ ಕಾರ್ಯಕ್ರಮದಲ್ಲಿ ಇತ್ತ ಆರ್. ಅಶೋಕ ಎದ್ದು ಹೋಗಿದ್ದರು. ಅಶ್ವತ್ಥ್ ನಾರಾಯಣ ಹೋದ ಬಳಿಕ, ಬಿಜೆಪಿಯ ಮಿತ್ರ ಪಕ್ಷ ಜೆಡಿಎಸ್ ಆನಂತರ ಏಕಾಂಗಿಯಾಗಿ ಹೋರಾಟ ಮಾಡುವಂತಾಗಿದೆ. ಈ ಎಲ್ಲ ಬೆಳವಣಿಗೆ ಗಮನಿಸಿರುವ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರು ಇವರೆಲ್ಲ ಕಾಟಾಚಾರಕ್ಕೆ ಬಂದು ಭಾಷಣ ಮಾಡಿ ಹೋದರು ಅಷ್ಟೇ ಎಂದು ಮಾತಾಡಿಕೊಂಡಿದ್ದಾರೆ. ಇದಕ್ಕೆ ಸರಿಯಾಗಿ ಮಾರನೇ ದಿನವೇ ಬಸನಗೌಡ ಪಾಟೀಲ್ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿರುವುದು ಎಂದು ಹೇಳಲಾಗುತ್ತಿದೆ.

ಬಿಜೆಪಿಯಲ್ಲಿ ಬಿ.ವೈ.ವಿಜಯೇಂದ್ರ ನಾಯಕತ್ವಕ್ಕೆ ಪ್ರಬಲ ವಿರೋಧ ಇದೆ ಅನ್ನುವುದು ಗುಟ್ಟಾಗಿ ಉಳಿದಿಲ್ಲ. ಪಕ್ಷದ ರಾಷ್ಟ್ರಾಧ್ಯಕ್ಷ ನೇಮಕದ ನಂತರವಷ್ಟೇ ರಾಜ್ಯದ ಸಮಸ್ಯೆ ಬಗೆಹರಿಬಹುದು. ಇದೇ ವೇಳೆ ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬೇಡ ಎಂದು ಒಂದು ಗುಂಪು ಪ್ರಬಲವಾಗಿ ಹೋರಾಟ ಮಾಡಿತ್ತಾದರೂ, ವಿಜಯೇಂದ್ರ ಅವರನ್ನು ಬದಲಿಸಲು ಮುಂದಾಗದ ವರಿಷ್ಠರು ಬಹಿರಂಗವಾಗಿ ಸಡ್ಡು ಹೊಡೆದು ನಿಂತಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನೇ ಪಕ್ಷದಿಂದ ಉಚ್ಚಾಟನೆ ಮಾಡಿದ್ದರು. ಈ ಪ್ರಕರಣದಿಂದ ತಮಗೂ ಆ ಗತಿ ಬರುವುದು ಬೇಡ ಎಂದು ಪ್ರಬಲ ಗುಂಪು ಈಗ ಸುಮ್ಮನಾಗಿದೆ. ಸಹಕಾರ ಕೊರತೆಯಿಂದ ಬಿಜೆಪಿಯಲ್ಲಿ ಯಾವುದೇ ಒಗ್ಗಟ್ಟಿನ ಹೋರಾಟಗಳು ಕಾಣುತ್ತಿಲ್ಲ. ಮುಂಚೂಣಿ ನಾಯಕರು ಹೋರಾಟದಲ್ಲಿ ಕಾಣಿಸಿಕೊಂಡರೂ ನಾನೊಂದು ತೀರ ನೀನೊಂದು ತೀರ ಎನ್ನುವಂತಾಗಿದೆ.

 

 

 

Related Articles

Back to top button