ಪ್ರೀತಿಸಿ ಮದುವೆಯಾದ ಪತ್ನಿಯನ್ನು ಲಾಡ್ಜ್‌ಗೆ ಕರೆದುಕೊಂಡು ಹೋಗಿ ಉಸಿರುಗಟ್ಟಿಸಿ ಕೊಂದು ಪತಿ ಎಸ್ಕೇಪ್!
Views: 67
ಕನ್ನಡ ಕರಾವಳಿ ಸುದ್ದಿ: ಪತ್ನಿಯನ್ನು ಲಾಡ್ಜ್‌ಗೆ ಕರೆದುಕೊಂಡು ಬಂದ ಪತಿಯೊಬ್ಬ ಆಕೆಯ ಕತ್ತು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಲಾಡ್ಜ್ ಒಂದರಲ್ಲಿ ನಡೆದಿದೆ.
ಗೌರಿಬಿದನೂರು ತಾಲೂಕಿನ ನಗರಗೆರೆ ಗ್ರಾಮದ ಮೂಲದ ವಿದ್ಯಾ (23) ಕೊಲೆಯಾದ ದುರದೃಷ್ಟಕರ ಮಹಿಳೆ. ಕೊಲೆ ಎಸಗಿದ ಆಕೆಯ ಪತಿ ಆನಂದ್ ಸದ್ಯ ತಲೆಮರೆಸಿಕೊಂಡಿದ್ದಾನೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಆನಂದ್ ತನ್ನ ಪತ್ನಿ ವಿದ್ಯಾಳನ್ನು ಲಾಡ್ಜ್‌ಗೆ ಕರೆತಂದು, ಆಕೆಯ ಐಡಿ ಕಾರ್ಡ್‌ನ ಟ್ಯಾಗ್‌ನಿಂದ ಕತ್ತು ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಅಥವಾ ಸುಳಿವು ಸಿಗದಂತೆ ಮಾಡಲು ಆಕೆಯ ಮೊಬೈಲ್ ಫೋನ್ ತೆಗೆದುಕೊಂಡು ಲಾಡ್ಜ್‌ನಿಂದ ಕಾಲ್ಕಿತ್ತಿದ್ದಾನೆ.
ಮೃತ ವಿದ್ಯಾ ಹಾಗೂ ಆನಂದ್ ನಾಲ್ಕು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಒಂದು ಗಂಡು ಮಗುವಿದ್ದು, ದೊಡ್ಡಬಳ್ಳಾಪುರ ನಗರದ ಗಾಂಧಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆದರೆ ಕಳೆದ ಆರು ತಿಂಗಳಿಂದ ದಂಪತಿ ನಡುವೆ ತೀವ್ರ ಕೌಟುಂಬಿಕ ಕಲಹ ಏರ್ಪಟ್ಟಿತ್ತು. ಮನಸ್ತಾಪ ಹೆಚ್ಚಾದ ಹಿನ್ನೆಲೆಯಲ್ಲಿ ವಿದ್ಯಾ ಎರಡು ತಿಂಗಳ ಹಿಂದೆ ಪತಿಯನ್ನು ತೊರೆದು ಬೆಂಗಳೂರಿನ ಪಿಜಿಯೊಂದರಲ್ಲಿ ನೆಲೆಸಿದ್ದರು.
ಪತ್ನಿ ಕಾಣೆಯಾಗಿರುವ ಬಗ್ಗೆ ಆನಂದ್ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಸುಮಾರು 20 ದಿನಗಳ ಹಿಂದೆ ಪೊಲೀಸರು ವಿದ್ಯಾಳನ್ನು ಠಾಣೆಗೆ ಕರೆಸಿ, ದಂಪತಿಗೆ ಬುದ್ಧಿವಾದ ಹೇಳಿ ಕೌನ್ಸೆಲಿಂಗ್ ನಡೆಸಿ ಮತ್ತೆ ಆನಂದ್ ಜೊತೆಗೆ ಕಳುಹಿಸಿಕೊಟ್ಟಿದ್ದರು. ಮತ್ತೆ ಇಬ್ಬರ ನಡುವೆ ಜಗಳ ವಿಕೋಪಕ್ಕೆ ತಿರುಗಿ, ಆನಂದ್ ಈ ಕೃತ್ಯ ಎಸಗಿದ್ದಾನೆ. ಘಟನೆ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿ ಆನಂದ್‌ಗಾಗಿ ಪೊಲೀಸರು ಜಾಲ ಬೀಸಿದ್ದಾರೆ.






