ಹೆಂಡತಿ ಸರಿ ಇದ್ದರೆ ಸಂಸಾರ, ತಕ್ಕಡಿ ಸರಿ ಇದ್ದರೆ ವ್ಯಾಪಾರ: ವಾಸ್ತುತಜ್ಞ ಡಾ. ಬಸವರಾಜ್ ಶೆಟ್ಟಿಗಾರ್
Views: 168
ಕನ್ನಡ ಕರಾವಳಿ ಸುದ್ದಿ:“ಗೃಹಿಣಿ ಗೃಹಮುಚ್ಯತೇ” ಎಂಬಂತೆ ಮನೆಯಲ್ಲಿ ಗೃಹಿಣಿಯಾದವಳು ತಾಳ್ಮೆ, ಶ್ರದ್ಧೆ, ನಿಷ್ಠೆ, ಭಕ್ತಿ ಇದ್ದರೆ ಮಾತ್ರ ಆ ಗೃಹ ಉಚ್ಚಾಯ ಸ್ಥಿತಿಗೆ ತೆರಳುತ್ತದೆ, ಇಲ್ಲದಿದ್ದರೆ ಅಧಃಪತನವಾಗುತ್ತದೆ. ಗಂಡ ಹೆಂಡತಿ ಎಂದರೆ ಒಂದು ರಥದ ಎರಡು ಗಾಲಿಗಳಿದ್ದಂತೆ. ತಮ್ಮ ಜೀವನದ ಸಾರ್ಥಕ್ಯ ಕ್ಷಣಗಳನ್ನು ಸಮತೋಲನ ಮಾಡಿಕೊಂಡು ಹೋಗಬೇಕಾದ್ದು ದಂಪತಿಗಳ ಕರ್ತವ್ಯ. ಹಾಗಾಗಿ ಲೋಕರೂಢಿಯಲ್ಲಿ ಹೇಳುವ ಮಾತು “ಹೆಂಡತಿ ಸರಿ ಇದ್ದರೆ ಸಂಸಾರ, ತಕ್ಕಡಿ ಸರಿ ಇದ್ದರೆ ವ್ಯಾಪಾರ” ಎನ್ನುವ ನಾಣ್ಣುಡಿ ಇದೆ ಎಂದು ವಾಸ್ತುತಜ್ಞ ಪ್ರಸಂಗಕರ್ತ ಡಾ.ಬಸವರಾಜ್ ಶೆಟ್ಟಿಗಾರ್ರವರು ಇತ್ತೀಚೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ.) ಕುಂದಾಪುರ 2 ಯೋಜನ ಕಛೇರಿ ವ್ಯಾಪ್ತಿಯ, ಕೋಟೇಶ್ವರ ವಲಯದ ಬೀಜಾಡಿ ಕಾರ್ಯಕ್ಷೇತ್ರದ ನಿಸರ್ಗ ಜ್ಞಾನವಿಕಾಸ ಕೇಂದ್ರದ 9ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಸ್ವ-ಸಹಾಯ ಸಂಘ ತರಬೇತು ಸಂಸ್ಥೆಯ ಉಡುಪಿ ಇಲ್ಲಿನ ಉಪನ್ಯಾಸಕರಾದ ನವೀನ್, ತಾಲೂಕು ಯೋಜನಾಧಿಕಾರಿಯಾದ ಸುಧೀರ್, ನಿಕಟಪೂರ್ವ ವಲಯ ಅಧ್ಯಕ್ಷರಾದ ಮಾಧವ ಆಚಾರ್ಯ, ಮೇಲ್ವಿಚಾರಕರಾದ ರೋಹಿಣಿ ಶುಭ ಹಾರೈಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಕವಿತಾ ಸ್ವಾಗತಿಸಿದರು, ಸೇವಾಪ್ರತಿನಿಧಿ ಸುಶೀಲಾ ವಂದಿಸಿದರು.






