ಇನ್‌ಸ್ಟಾಗ್ರಾಮ್ ಮೂಲಕ ಆರಂಭವಾದ ಪ್ರೀತಿ: ಮೂರು ಮಕ್ಕಳ ತಾಯಿ18 ವರ್ಷದ ಯುವಕನೊಂದಿಗೆ!
Views: 59
ಕನ್ನಡ ಕರಾವಳಿ ಸುದ್ದಿ: ಇನ್‌ಸ್ಟಾಗ್ರಾಮ್ ರೀಲ್ಸ್ ಮೂಲಕ ಆರಂಭವಾದ ಪರಿಚಯವೊಂದು ಪ್ರೇಮಕ್ಕೆ ತಿರುಗಿ, ಕೌಟುಂಬಿಕ ಕಲಹಕ್ಕೆ ಕಾರಣವಾದ ಘಟನೆ ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ವರದಿಯಾಗಿದೆ.
ಮೂರು ಮಕ್ಕಳ ತಾಯಿ 38 ವರ್ಷದ ಮಹಿಳೆಯೊಬ್ಬರು ಪತಿ ಹಾಗೂ ಮಕ್ಕಳನ್ನು ತೊರೆದು 18 ವರ್ಷದ ಯುವಕನೊಂದಿಗೆ ವಾಸಿಸಲು ತೆರಳಿದ್ದಾರೆ.
ಬಿಹಾರ ಮೂಲದ ಸುಮಾನ್ ಕುಮಾರಿ (38) ಅವರಿಗೆ 15 ವರ್ಷಗಳ ಹಿಂದೆ ಮದುವೆಯಾಗಿದ್ದು, 14, 8 ಮತ್ತು 6 ವರ್ಷದ ಮೂವರು ಮಕ್ಕಳಿದ್ದಾರೆ. ಪತಿ ಪ್ರದ್ಯುಮನ್ ಕೂಲಿ ಕೆಲಸ ಮಾಡಿಕೊಂಡು ಕುಟುಂಬವನ್ನು ನಿರ್ವಹಿಸುತ್ತಿದ್ದರು.
ಈ ನಡುವೆ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡುವ ಹವ್ಯಾಸ ಹೊಂದಿದ್ದ ಸುಮಾನ್‌ಗೆ, ಹರಿಯಾಣದ ಸೋನಿಪತ್‌ನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಲಖಿಂಪುರ್ ಖೇರಿಯ ಪವನ್ (18) ಪರಿಚಯವಾಗಿದ್ದಾನೆ. ಸುಮಾರು 20 ವರ್ಷಗಳ ವಯಸ್ಸಿನ ಅಂತರವಿದ್ದರೂ ಇಬ್ಬರ ನಡುವೆ ಪ್ರೇಮ ಸಂಬಂಧ ಬೆಳೆದಿದೆ ಎನ್ನಲಾಗಿದೆ.
ಸುಮಾರು ಮೂರು ತಿಂಗಳ ಹಿಂದೆ ಸುಮಾನ್ ತನ್ನ ಪತಿ ಹಾಗೂ ಮೂವರು ಮಕ್ಕಳನ್ನು ಬಿಟ್ಟು ಸೋನಿಪತ್‌ಗೆ ತೆರಳಿ ಪವನ್ ಜೊತೆ ವಾಸಿಸಲು ಆರಂಭಿಸಿದ್ದಾಳೆ.
ಆದರೆ ಇತ್ತೀಚೆಗೆ ಸುಮಾನ್ ಬೇರೊಬ್ಬ ವ್ಯಕ್ತಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಳೆ ಎಂಬ ಅನುಮಾನದಿಂದ ಇಬ್ಬರ ನಡುವೆ ಜಗಳ ನಡೆದಿದೆ. ಇದರಿಂದ ಬೇಸತ್ತ ಪವನ್ ಸೋನಿಪತ್ ತೊರೆದು ತನ್ನ ಸ್ವಗ್ರಾಮಕ್ಕೆ ಮರಳಿದ್ದಾನೆ. ಆದರೆ ಸುಮಾನ್ ಆತನನ್ನು ಹಿಂಬಾಲಿಸಿ ಲಖಿಂಪುರ್ ಖೇರಿಯಲ್ಲಿರುವ ಪವನ್ ಮನೆಗೆ ತೆರಳಿದ್ದಾಳೆ.
ವಿಷಯ ತಿಳಿದ ಬಳಿಕ ಸುಮಾನ್ ಪತಿ ತನ್ನ ಮೂವರು ಮಕ್ಕಳೊಂದಿಗೆ ಬಿಹಾರದಿಂದ ಲಖಿಂಪುರ್ ಖೇರಿಗೆ ಆಗಮಿಸಿದ್ದಾರೆ. ಗ್ರಾಮಸ್ಥರು ಪಂಚಾಯಿತಿ ನಡೆಸಿ, ಪೊಲೀಸರ ಸಮ್ಮುಖದಲ್ಲಿ ಸುಮಾನ್ ಅವರನ್ನು ಮನವೊಲಿಸಲು ಪ್ರಯತ್ನಿಸಿದ್ದಾರೆ.
ಮಕ್ಕಳು ಕಣ್ಣೀರು ಹಾಕುತ್ತಾ, “ಅಮ್ಮ ಮನೆಗೆ ಬಾ” ಎಂದು ಮನವಿ ಮಾಡಿದರೂ ಆಕೆ ಹಿಂತಿರುಗಲು ಒಪ್ಪಲಿಲ್ಲ ಎನ್ನಲಾಗಿದೆ. “ನನ್ನ ಗಂಡನಿಗೆ ಸಾಕಷ್ಟು ಆದಾಯವಿಲ್ಲ, ಆತನೇ ಮಕ್ಕಳನ್ನು ನೋಡಿಕೊಳ್ಳಲಿ” ಎಂದು ಹೇಳಿ ತನ್ನ ನಿರ್ಧಾರವನ್ನು ಬದಲಿಸಲು ನಿರಾಕರಿಸಿದ್ದಾಳೆ ಎನ್ನಲಾಗಿದೆ.
ಇನ್ನೊಂದೆಡೆ, “ಸುಮಾನ್‌ಗೆ ಮದುವೆಯಾಗಿದ್ದು, ಮಕ್ಕಳಿದ್ದಾರೆ ಎಂಬುದು ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದಾಗ ನನಗೆ ತಿಳಿದಿರಲಿಲ್ಲ” ಎಂದು ಪವನ್ ಹೇಳಿಕೊಂಡಿದ್ದಾನೆ.
ಕೊನೆಗೆ ಸುಮಾನ್ ತನ್ನ ನಿರ್ಧಾರದಲ್ಲಿ ಅಚಲವಾಗಿದ್ದರಿಂದ, ಪತಿ ಕಣ್ಣೀರು ಹಾಕುತ್ತಿದ್ದ ಮೂವರು ಮಕ್ಕಳನ್ನು ಕರೆದುಕೊಂಡು ಬಿಹಾರಕ್ಕೆ ಹಿಂತಿರುಗಿದ್ದಾರೆ ಎನ್ನಲಾಗಿದೆ.
ಇನ್‌ಸ್ಟಾಗ್ರಾಮ್ ಮೂಲಕ ಆರಂಭವಾದ ಸಂಬಂಧದಿಂದ ಪತಿ ಹಾಗೂ ಮಕ್ಕಳನ್ನು ತೊರೆದ ಮಹಿಳೆಯ ನಡೆ ಇದೀಗ ಸ್ಥಳೀಯವಾಗಿ ಚರ್ಚೆಗೆ ಕಾರಣವಾಗಿದೆ.






