ಇತರೆ

ಮಾರಕಾಸ್ತ್ರದಿಂದ ಪತ್ನಿಯನ್ನು ಅಟ್ಟಾಡಿಸಿಕೊಂಡು ಮಚ್ಚಿನಿಂದ ಹಲ್ಲೆ ಮಾಡಿ ಆ್ಯಸಿಡ್‌ ಎರಚಿದ ಪತಿ

Views: 54

ಕನ್ನಡ ಕರಾವಳಿ ಸುದ್ದಿ: ಹಾಡಹಗಲೇ ಪತ್ನಿಯನ್ನು ಅಟ್ಟಾಡಿಸಿಕೊಂಡು ಹೋಗಿ ಮಚ್ಚಿನಿಂದ ಹಲ್ಲೆ ಮಾಡಿ ಆ್ಯಸಿಡ್‌ ಎರಚಿರುವ ಘಟನೆ ನಡೆದಿದೆ.

ಜೆ.ಪಿ.ನಗರದ ನಾರಾಯಣ ಆಸ್ಪತ್ರೆಯಲ್ಲಿ ನರ್ಸ್‌ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮಧುಮಿತಾ ಹಲ್ಲೆಗೊಳಗಾದ ಸಂತ್ರಸ್ತೆ

2023 ರಲ್ಲಿ ತಮಿಳುನಾಡಿನ ಮಧುರೈ ಮೂಲದ ನಿವಾಸಿ ವೆಂಕಟೇಶನ್‌ ಎಂಬಾತನನ್ನು ಮಧುಮಿತಾ ವಿವಾಹವಾಗಿದ್ದರು. ನಂತರ ಅವರ ದಾಂಪತ್ಯ ಜೀವನದಲ್ಲಿ ಬಿರುಕುಂಟಾಗಿದೆ. ವೈವಾಹಿಕ ಭಿನ್ನಾಭಿಪ್ರಾಯ ಹಾಗೂ ಕೌಟುಂಬಿಕ ಕಲಹದ ಕಾರಣಗಳಿಂದ ದಂಪತಿ ಬೇರ್ಪಟ್ಟು ಕಳೆದ ಒಂದು ವರ್ಷದಿಂದ ಪ್ರತ್ಯೇಕವಾಗಿದ್ದಾರೆ.

ವೆಂಕಟೇಶನ್‌ ಚೆನ್ನೈನಲ್ಲಿ ವಾಸವಾಗಿದ್ದರೆ, ಮಧುಮಿತಾ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಜೆ.ಪಿ.ನಗರದ ನಾರಾಯಣ ಆಸ್ಪತ್ರೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ನರ್ಸ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಧುಮಿತಾ ಅವರು ಎಂದಿನಂತೆ ಆಸ್ಪತ್ರೆಗೆ ಬಂದಿದ್ದಾರೆ.ಮಧುಮಿತಾ ಅವರು ತಿಂಡಿ ತಿನ್ನಲು ಆಸ್ಪತ್ರೆಯಿಂದ ಹೊರಗೆ ಬಂದಿದ್ದಾರೆ.

ಚೆನ್ನೈನಿಂದ ನಗರಕ್ಕೆ ಬಂದಿದ್ದ ವೆಂಕಟೇಶನ್‌ ಇದೇ ಸಮಯಕ್ಕಾಗಿ ಕಾದು ಸಂಚು ರೂಪಿಸಿ ಪತ್ನಿ ಕೆಲಸ ಮಾಡುತ್ತಿದ್ದ ಆಸ್ಪತ್ರೆ ಬಳಿ ಬೈಕ್‌ನಲ್ಲಿ ಬಂದು ಹೊಂಚು ಹಾಕಿ ತಾನು ತಂದಿದ್ದ ಮಾರಕಾಸ್ತ್ರದಿಂದ ಏಕಾಏಕಿ ಆಕೆಯ ಮೇಲೆ ದಾಳಿ ಮಾಡಲು ಮುಂದಾಗಿದ್ದಾನೆ.ತಕ್ಷಣ ಆಕೆ ಆತನಿಂದ ತಪ್ಪಿಸಿಕೊಳ್ಳಲು ಚೀರಾಡಿಕೊಂಡು ಆಸ್ಪತ್ರೆಯ ಪಾರ್ಕಿಂಗ್‌ ಜಾಗಕ್ಕೆ ಓಡಿದರೂ ಬಿಡದೆ ಆಕೆಯನ್ನು ಸಿನಿಮೀಯ ರೀತಿಯಲ್ಲಿ ಅಟ್ಟಾಡಿಸಿಕೊಂಡು ಹೋಗಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಲ್ಲದೇ ಆ್ಯಸಿಡ್‌ ಎರಚಿ ಪರಾರಿಯಾಗಲು ಯತ್ನಿಸಿದ್ದಾನೆ.

ಆ ಸಂದರ್ಭದಲ್ಲಿ ರಸ್ತೆಯ ಪಕ್ಕದ ಸಿಗ್ನಲ್‌ನಲ್ಲಿ ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸರು ಸಾರ್ವಜನಿಕರ ಸಹಾಯದಿಂದ ಆತನನ್ನು ವಶಕ್ಕೆ ಪಡೆದು ಬಳಿಕ ಜೆ.ಪಿ.ನಗರ ಠಾಣೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಪತಿಯಿಂದ ಹಲ್ಲೆಗೊಳಗಾದ ಮಧುಮಿತಾ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದು ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಜೆ.ಪಿನಗರ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Related Articles

Back to top button
error: Content is protected !!