ಪತ್ನಿಯ ಶೀಲ ಶಂಕಿಸಿ ಭೀಕರವಾಗಿ ಹತ್ಯೆ:ಹೃದಯಾಘಾತ ಅಂತಾ ಬಿಂಬಿಸಿದ ಪತಿ ಪೊಲೀಸರ ಅತಿಥಿ!
Views: 66
ಕನ್ನಡ ಕರಾವಳಿ ಸುದ್ದಿ: ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಪತ್ನಿಯ ಶೀಲ ಶಂಕಿಸಿದ ಪತಿಯೊಬ್ಬ ಆಕೆಯನ್ನು ಭೀಕರವಾಗಿ ಹತ್ಯೆ ಮಾಡಿದ್ದಾನೆ. ಬಳಿಕ ಅದನ್ನು ಸಹಜ ಸಾವು ಎಂದು ಬಿಂಬಿಸಲು ಹೋಗಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
30 ವರ್ಷದ ಕಿರಣಾ ಬಾಳೇಕುಂದ್ರಿ ಮೃತ ದುರ್ದೈವಿ.
ಪತ್ನಿಯ ನಡತೆಯ ಮೇಲೆ ಸಂಶಯ ವ್ಯಕ್ತಪಡಿಸುತ್ತಿದ್ದ ಪತಿ ಅವಿನಾಶ್ ಬಾಳೇಕುಂದ್ರಿ, ಇದೇ ವಿಚಾರವಾಗಿ ಕಳೆದ ಎರಡು ದಿನಗಳಿಂದ ಮನೆಯಲ್ಲಿ ಕಿರಿಕಿರಿ ಮಾಡುತ್ತಿದ್ದ ಎನ್ನಲಾಗಿದೆ.
ಕಳೆದ ಎರಡು ದಿನಗಳಿಂದ ಪತಿ-ಪತ್ನಿಯ ನಡುವೆ ತೀವ್ರ ಜಗಳ ನಡೆಯುತ್ತಿತ್ತು. ಜಗಳ ವಿಕೋಪಕ್ಕೆ ಹೋದ ಸಂದರ್ಭದಲ್ಲಿ ಆಕ್ರೋಶಗೊಂಡ ಅವಿನಾಶ್, ಪತ್ನಿಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಪತಿಯ ಬರ್ಬರ ಹಲ್ಲೆಗೆ ತುತ್ತಾದ ಕಿರಣಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಪತ್ನಿ ಮೃತಪಡುತ್ತಿದ್ದಂತೆಯೇ ಗಾಬರಿಗೊಂಡ ಆರೋಪಿ ಅವಿನಾಶ್, ಪೊಲೀಸರು ಮತ್ತು ಮನೆಯವರಿಂದ ತಪ್ಪಿಸಿಕೊಳ್ಳಲು ಹೊಸ ಸಂಚು ರೂಪಿಸಿದ್ದ. ಪತ್ನಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ಎಲ್ಲರಿಗೂ ನಂಬಿಸಲು ಯತ್ನಿಸಿದ್ದಾನೆ. ಮಹಿಳೆಯ ದೇಹದ ಮೇಲಿದ್ದ ಗಾಯದ ಗುರುತುಗಳು ಮತ್ತು ಪೋಲಿಸರ ತನಿಖೆಯ ವೇಳೆ ಸತ್ಯಾಂಶ ಹೊರಬಿದ್ದಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ನಂದಗಡ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪತ್ನಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪೊಲೀಸರು ಪತಿ ಅವಿನಾಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಸದ್ಯ ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.






