ನಾಪತ್ತೆಯಾಗಿದ್ದ ಸಂದೀಪ್ ಗೌಡ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆ
Views: 77
ಕನ್ನಡ ಕರಾವಳಿ ಸುದ್ದಿ: ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಮುಂಗ್ಲಿಮಜಲು ನಿವಾಸಿ ಶಾಂತಪ್ಪ ಗೌಡ ಅವರ ಪುತ್ರ ಸಂದೀಪ್ ಗೌಡ (29) ಕೆಲಸಕ್ಕೆಂದು ಹೋದವನು ಮನೆಗೆ ಹಿಂದಿರುಗದೆ ನಾಪತ್ತೆಯಾಗಿರುವ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ಸಂದೀಪ್ ಗೌಡ ಶವ ಕಾಡಿನಲ್ಲಿ ಪತ್ತೆಯಾಗಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರತೀಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ನವಂಬರ್ 27 ರಿಂದ ನಾಪತ್ತೆಯಾಗಿದ್ದ ಯುವಕನನ್ನು ಕೊಲೆ ಮಾಡಿ ಪೆಟ್ರೋಲ್ ಸುರಿದು ಸುಡಲಾಗಿದೆ ಎಂದು ಹೇಳಲಾಗಿದೆ. ಮರ್ಧಾಳ ನಿವಾಸಿ ಸಂದೀಪ್ ಕೊಲೆಗೀಡಾದ ಯುವಕನಾಗಿದ್ದು, ಪ್ರತೀಕ್ ಎನ್ನುವಾತ ಈತನನ್ನು ಕೊಲೆ ಮಾಡಿರುವುದಾಗಿ ಪೋಲೀಸರು ಸ್ಪಷ್ಟಪಡಿಸಿದ್ದಾರೆ.ತನಿಖೆಯ ವೇಳೆ ಸಂದೀಪ್ ನನ್ನು ಕೊಲೆ ಮಾಡಿರುವುದನ್ನು ಆರೋಪಿ ಒಪ್ಪಿಕೊಂಡಿದ್ದು, ಕೃತ್ಯದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದಾರೆಎಂದು ತಿಳಿದುಬಂದಿದೆ.
ನಾಪತ್ತೆಯಾಗಿದ್ದ ಸಂದೀಪ್ ಗಾಗಿ ಆತನ ಮನೆಮಂದಿ ಹುಡುಕಾಟ ನಡೆಸಿದ್ದು, ಈ ಬಗ್ಗೆ ಕಡಬ ಪೋಲೀಸ್ ಠಾಣೆಗೆ ದೂರು ನೀಡಲೂ ಸಂದೀಪ್ ತಾಯಿ ಸರೋಜ ತೆರಳಿದ್ದರು. ಈ ಸಂದರ್ಭದಲ್ಲಿ ಪೋಲೀಸರು ಆಕೆಯನ್ನು ಬೆದರಿಸಿ ದೂರು ಸ್ವೀಕರಿಸಲು ನಿರಾಕರಿಸಿದ್ದರು ಎನ್ನುವ ಆರೋಪವನ್ನೂ ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರು ಮಾಡಿದ್ದಾರೆ. ಈ ನಡುವೆ ಆರೋಪಿ ಪ್ರತೀಕ್, ಸಂದೀಪ್ ನಾಪತ್ತೆಯಾಗಿರುವ ವಿಚಾರವನ್ನು ಊರೆಲ್ಲಾ ಹರಡಿದ್ದು, ತನಗೂ, ಸಂದೀಪ್ ನ ನಾಪತ್ತೆ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವುದನ್ನು ಬಿಂಬಿಸಲು ಪ್ರಯತ್ನಿಸಿದ್ದಾನೆ. ಆದರೆ ಆತನ ಈ ವರ್ತನೆಯೇ ಗ್ರಾಮಸ್ಥರಲ್ಲಿ ಹಲವು ಸಂಶಯಕ್ಕೆ ಕಾರಣವಾದ ಹಿನ್ನಲೆಯಲ್ಲಿ ಗ್ರಾಮಸ್ಥರು ಕಡಬ ಪೋಲೀಸ್ ಠಾಣೆಗೆ ತೆರಳಿ, ಪ್ರತೀಕ್ ನನ್ನು ವಿಚಾರಣೆ ನಡೆಸುವಂತೆ ಒತ್ತಾಯಿಸಿದ್ದರು. ಈ ಕಾರಣಕ್ಕೆ ಪ್ರತೀಕ್ ನನ್ನು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆರೋಪಿ ತನ್ನ ಕೃತ್ಯವನ್ನು ಪೋಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಪ್ರತೀಕ್ ಮತ್ತು ಆತನ ಸ್ನೇಹಿತರು ನೆಟ್ಟಣ ಸಮೀಪದ ಕೊಣಾಜೆ ಕಾಡಿನಲ್ಲಿ ಸಂದೀಪ್ ನನ್ನು ಕೊಂದು, ಶವಕ್ಕೆ ಪೆಟ್ರೋಲ್ ಸುರಿದಿರುವ ವಿಚಾರವನ್ನು ಆರೋಪಿ ಪೋಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಕೊಲೆಯ ಹಿಂದೆ ಗಾಂಜಾ ಮಾಫಿಯಾದ ಕೈವಾಡವಿದೆ ಎನ್ನುವ ಆರೋಪವನ್ನು ಸ್ಥಳೀಯರು ಮಾಡಿದ್ದಾರೆ.