ಜನಮನ

ನಂದಿನಿ ಹಾಲು ದುಬಾರಿ, ದರ ಏರಿಕೆ ವಾಪಸ್ ಪಡೆಯದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ ಬಿಜೆಪಿ !

Views: 395

ಬೆಂಗಳೂರು,  ಕರ್ನಾಟಕ ಹಾಲು ಮಹಾಮಂಡಲ ಹಾಲಿನ ದರವನ್ನು ಪರಿಷ್ಕರಿಸಿದ್ದು, ಪ್ರತಿ ಲೀಟರ್ ಹಾಲಿನ ಬೆಲೆಯನ್ನು 2 ರೂಪಾಯಿ ಏರಿಕೆ ಮಾಡಲಾಗಿದೆ. ದರ ಏರಿಕೆ ನಾಳೆಯಿಂದಲೇ ಜಾರಿಯಾಗಲಿದೆ.

ನಂದಿನಿ ಹಾಲಿನ ದರ ಏರಿಕೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೆಎಂಎಫ್‌ನ ಅಧ್ಯಕ್ಷ ಭೀಮಾನಾಯಕ್ ಅವರು, 1 ಲೀಟರ್ ಹಾಲಿನ ಪ್ಯಾಕೆಟ್‌ನಲ್ಲಿ ಹೆಚ್ಚುವರಿ 50 ಎಂ.ಎಲ್. ಹಾಲನ್ನು ಸೇರಿಸಿ 1 ಲೀಟರ್ 50 ಎಂ.ಎಲ್. ಹಾಲಿನ ಪ್ಯಾಕೆಟ್‌ನ್ನು ನಾಳೆಯಿಂದ ಗ್ರಾಹಕರಿಗೆ ನೀಡಲಾಗುತ್ತದೆ. ಹೆಚ್ಚುವರಿ 50 ಎಂ.ಎಲ್. ಹಾಲಿನ ದರ 2 ರೂಪಾಯಿ 10 ಪೈಸೆಯಾಗಲಿದ್ದು, 10 ಪೈಸೆ ಬಿಟ್ಟು 1ಲೀಟರ್ 50 ಎಂ.ಎಲ್. ಪ್ಯಾಕೆಟ್‌ಗೆ 2 ರೂಪಾಯಿ ಏರಿಕೆ ಮಾಡಿದ್ದೇವೆ ಎಂದರು.

ನಂದಿನಿ ಹಾಲಿನ ಅರ್ಧ ಮತ್ತು 1 ಲೀಟರ್ ಪ್ಯಾಕೆಟ್‌ನಲ್ಲಿ ಹೆಚ್ಚುವರಿ 50 ಎಂ.ಎಲ್. ಹಾಲನ್ನು ಸೇರಿಸಿದ್ದು, ಇದು ಹೆಚ್ಚುವರಿ ಹಾಲಿಗೆ ತಗುಲುವ ವೆಚ್ಚವಾಗಿದೆಯೇ ಹೊರತು ಹಾಲಿನ ದರದಲ್ಲಿ ಏರಿಕೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಸದ್ಯ ನಂದಿನಿ ನೀಲಿ ಪ್ಯಾಕೆಟ್ ಹಾಲಿನ ದರ 42 ರೂ. ಇದ್ದು, ನಾಳೆಯಿಂದ 44 ರೂಪಾಯಿ ಆಗಲಿದೆ. ಅರ್ಧ ಲೀಟರ್ ಹಾಲಿನ ದರವನ್ನು 22 ರೂ. ನಿಂದ 24 ರೂ.ಗೆ ಹೆಚ್ಚಿಸಲಾಗಿದ್ದು, ಅರ್ಧ ಲೀಟರ್ ಹಾಲಿನ ಪ್ಯಾಕೆಟ್‌ನಲ್ಲೂ ಹೆಚ್ಚುವರಿ 50 ಎಂ.ಎಲ್. ಹಾಲನ್ನು ಸೇರಿಸಿ ವಿತರಿಸಲಾಗುವುದು ಎಂದು ಅವರು ಹೇಳಿದರು.

ಮೊಸರು, ಇತರೆ ನಂದಿನಿ ಉತ್ಪನ್ನಗಳ ದರದಲ್ಲಿ ಯಾವುದೇ ಏರಿಕೆ ಇಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಪ್ರಸ್ತುತ ಸುಗ್ಗಿ ಕಾಲವಾಗಿರುವುದರಿಂದ ಎಲ್ಲಾ ಹಾಲು ಒಕ್ಕೂಟಗಳ ವ್ಯಾಪ್ತಿಯಲ್ಲಿ ಹಾಲಿನ ಶೇಖರಣೆ ಪ್ರತಿದಿನ ಹೆಚ್ಚಾಗುತ್ತಿದ್ದು, ಪ್ರಸ್ತುತ ಶೇಖರಣೆಯು 1ಕೋಟಿ ಲೀಟರ್ ಹತ್ತಿರವಿದ್ದು, ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಹೆಚ್ಚುವರಿಯಾಗಿ 1 ಲೀಟರ್ ಮತ್ತು ಅರ್ಧ ಲೀಟರ್‌ನಲ್ಲಿ 50 ಎಂ.ಎಲ್. ಹಾಲನ್ನು ನೀಡುವ ತೀರ್ಮಾನ ಮಾಡಲಾಗಿದ್ದು, ಈ 50 ಎಂ.ಎಲ್. ಹೆಚ್ಚುವರಿ ಹಾಲಿಗೆ 2 ರೂಪಾಯಿ ದರ ಹೆಚ್ಚಳ ಮಾಡಲಾಗಿದೆ. ಅದರಂತೆ 1 ಲೀಟರ್ 50ಎಂ.ಎಲ್. ಹಾಲಿನ ಪ್ಯಾಕೆಟ್‌ಗೆ 2ರೂಪಾಯಿ ಹೆಚ್ಚಳವಾಗುತ್ತದೆ ಎಂದು ಅವರು ಹೇಳಿದರು.

ಈ ದರ ಪರಿಷ್ಕರಣೆ ನಾಳೆಯಿಂದಲೇ ಜಾರಿಯಾಗಲಿದೆ. ಒಕ್ಕೂಟದಲ್ಲಿ ಹಳೆಯ ದರ ಮುದ್ರಿತವಾಗಿರುವ ಹಾಲಿನ ಪ್ಯಾಕೆಟ್‌ಗಳು ದಾಸ್ತಾನಿದ್ದು, ಈ ದಾಸ್ತಾನು ಮುಗಿಯುವವರೆಗೂ ಹಳೆಯ ಮುದ್ರಿತ ಪರಿಮಾಣ ಪ್ಯಾಕೆಟ್‌ಗಳಲ್ಲಿ ಹಾಲು ಸರಬರಾಜಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಅವರು ಕೋರಿದರು.

ಸುದ್ದಿಗೋಷ್ಠಿಯಲ್ಲಿ ಕೆಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕ ಎನ್.ಕೆ. ಜಗದೀಶ್, ಮಾರುಕಟ್ಟೆ ನಿರ್ದೇಶಕ ರಘುನಂದನ್, ಮಂಡಳಿ ನಿರ್ದೇಶಕರಾದ ವೀರಭದ್ರಬಾಬು, ಭರಮಣ್ಣನವರ್ ಮತ್ತಿತರರು ಉಪಸ್ಥಿತರಿದ್ದರು.

ನಂದಿನಿ ಹಾಲಿನ ದರವನ್ನು ಹೆಚ್ಚಳ ಮಾಡಿರುವುದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದು, ಹಾಲಿನ ದರ ಏರಿಕೆಯನ್ನು ವಾಪಸ್ ಪಡೆಯದಿದ್ದರೆ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ನಡೆಸುವುದಾಗಿ ಪ್ರತಿಪಕ್ಷ ಬಿಜೆಪಿ ಎಚ್ಚರಿಕೆ ನೀಡಿದೆ.

.

Related Articles

Back to top button
error: Content is protected !!