ಡಿಕೆಶಿ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ–ವೀರಪ್ಪ ಮೊಯ್ಲಿ

Views: 71
ಕನ್ನಡ ಕರಾವಳಿ ಸುದ್ದಿ: ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಕಾರ್ಕಳದಲ್ಲಿ ನಡೆದ ಕಾಂಗ್ರೆಸ್ ಕುಟುಂಬೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ”ಡಿ. ಕೆ. ಶಿವಕುಮಾರ್ ಗೆ ಪ್ರಥಮ ಬಾರಿ ಎಂಎಲ್ಎ ಟಿಕೆಟ್ ಕೊಡಿಸಿದ್ದೇ ನಾನು. ಇವತ್ತು ಕರ್ನಾಟಕದಲ್ಲಿ ಯಶಸ್ವಿ ನಾಯಕರಾಗಿ ಮೂಡಿಬಂದಿದ್ದಾರೆ. ಅವರು ಸದ್ಯದಲ್ಲೇ ಮುಖ್ಯಮಂತ್ರಿ ಆಗಬೇಕು” ಎಂದರು.
”ಕಾರ್ಕಳವು ಗೊಮ್ಮಟೇಶ್ವರನ ಪುಣ್ಯಭೂಮಿ. ಶಿವಕುಮಾರ್ ಕೂಡ ಗೊಮ್ಮಟೇಶ್ವರನ ತರಹವೇ ಬೆಳೆಯಲಿ. ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ ಸಂಕಷ್ಟದಲ್ಲಿರುವಾಗ ಮಹತ್ವದ ಕೆಲಸಗಳನ್ನು ಮಾಡಿದ್ದಾರೆ. ರಾಷ್ಟ್ರದ ಪ್ರಮುಖ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಹೋರಾಟ ಮಾಡಿದ ಧೀಮಂತ ನಾಯಕರಾಗಿದ್ದಾರೆ. ಪಕ್ಷಕ್ಕೆ ಒಳ್ಳೆಯ ನಾಯಕತ್ವ ಕೊಟ್ಟಿದ್ದು, ಜೊತೆಗೆ ಸಂಘಟನೆಯನ್ನೂ ಮಾಡಿದ್ದಾರೆ” ಎಂದು ಹೇಳಿದರು.
”ಹೇಳಿಕೆಗಳು ಬರಬಹುದು ಹೋಗಬಹುದು. ನೀವು ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಯಾರೂ ಕೂಡ ಆತಂಕಪಡಬೇಕಾದ ಅವಶ್ಯಕತೆ ಇಲ್ಲ. ಟೀಕೆ ಮಾಡುವವರು ವೈಯಕ್ತಿಕ ತೃಪ್ತಿಗೆ ಟೀಕೆ ಮಾಡಬಹುದು. ಮುಖ್ಯಮಂತ್ರಿ ಹುದ್ದೆ ಯಾರೂ ಕೊಡುವ ವರ ಅಲ್ಲ. ಅದು ಅವರು ಸಂಪಾದನೆ ಮಾಡಿರುವ ಶಕ್ತಿ. ಕಾರ್ಕಳದ ಪುಣ್ಯ ಭೂವಿಯಲ್ಲಿ ಆಡಿದ ಈ ಮಾತು ನೂರಕ್ಕೆ ನೂರು ಸತ್ಯವಾಗಿದೆ. ಆದರೆ ಡಿಕೆಶಿ ಅವರೇ ನೀವು ಮಾತ್ರ ಯಾವುದಕ್ಕೂ ಪ್ರತಿಕ್ರಿಯೆ ಕೊಡಬಾರದು” ಎಂದು ಮೊಯ್ಲಿ ಸಲಹೆ ನೀಡಿದರು.
”ಡಿಕೆಶಿ ಮುಖ್ಯಮಂತ್ರಿ ಆಗುವುದು ಸೆಟಲ್ಡ್ ಮ್ಯಾಟರ್, ಇದು ತೀರ್ಮಾನ ಆಗಿರುವ ವಿಷಯವಾಗಿದೆ. ಜನರ ಮನಸ್ಸಿನಲ್ಲಿ ತೀರ್ಮಾನವಾಗಿದೆ, ಇತಿಹಾಸ ತೀರ್ಮಾನ ಮಾಡಿದೆ. ಮ್ಯಾಟರ್ ಆಫ್ ಟೈಮ್ ಅಷ್ಟೇ. ಅವರ ಬೆಂಬಲಿಗರು ಕೂಡ ನಾವೇ ಮಾಡಿಸಿದ್ದೇವೆ ಎಂದು ಹೇಳಿಕೊಳ್ಳಬೇಕಾಗಿಲ್ಲ. ಕೋಟಿ ಕೋಟಿ ಪ್ರಯತ್ನ ಮಾಡಿದರೂ ಮುಖ್ಯಮಂತ್ರಿ ಹುದ್ದೆ ತಪ್ಪಿಸಲು ಸಾಧ್ಯವಿಲ್ಲ ಅನ್ನೋದು ಶತಸಿದ್ಧ. ನೀವು ದೇವಸ್ಥಾನಕ್ಕೆ ಹೋಗುವುದರಲ್ಲಿ ತಪ್ಪಿಲ್ಲ. ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ದೇವರ ಭೂಮಿ. ಆದರೆ ಬಿಜೆಪಿ ದೇವರ ಭೂಮಿಯನ್ನು ರಣಭೂಮಿ ಮಾಡಿದೆ” ಎಂದು ಮೊಯ್ಲಿ ಟೀಕಿಸಿದರು.