ಡಿಕೆಶಿಯವರನ್ನು ಬಿಜೆಪಿಗೆ ಕರೆತರಲು ಪ್ರಯತ್ನ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
Views: 100
ಕನ್ನಡ ಕರಾವಳಿ ಸುದ್ದಿ: ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವಗೊಂದಲ ಮುಗಿಯುವ ಮೊದಲೇ, ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಾಂಬ್ ಸಿಡಿಸಿದ್ದಾರೆ.
ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ದೆಹಲಿಗೆ ಒಟ್ಟಿಗೆ ಹೋಗಿ ಅಮಿತ್ ಶಾ ಭೇಟಿಯಾಗಿದ್ದಾರೆ ಎಂದಿದ್ದಾರೆ. ಶಿವಕುಮಾರ್ ಬಿಜೆಪಿ ಸೇರುವ ವದಂತಿಯೂ ಇದೆ ಎಂದಿದ್ದಾರೆ.
ಡಿ.ಕೆ.ಶಿವಕುಮಾರ್‌ರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನ ನಡೆದಿತ್ತು ಎಂದು ಬಿಜೆಪಿಯಿಂದ ಉಚ್ಚಾಟಿತಗೊಂಡ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಧ್ಯಮದವರೊಂದಿಗೆ ಹೇಳಿಕೆ ನೀಡಿದ್ದಾರೆ.
ನನ್ನನ್ನು ಉಚ್ಛಾಟಿಸಿದ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್‌ರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನ ನಡೆದಿತ್ತು. ನಾನು ಪಕ್ಷದಲ್ಲಿದ್ರೆ ಇದು ಆಗಲ್ಲ ಅಂತ ಉಚ್ಛಾಟಿಸಿದ್ದರು. ವಿಜಯೇಂದ್ರ ತಾವು ಡಿಸಿಎಂ ಆಗಲು ದೆಹಲಿಯಲ್ಲಿ ಡಿಕೆಶಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು ಎಂದರು.
ಸುವರ್ಣಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಡಿಸಿಎಂ ಆಗುವ ಸಾಧ್ಯತೆ ಇದೆ ಅಂತ ಡಿಕೆಶಿಯನ್ನು ಭೇಟಿ ಮಾಡಿಸಿದ್ದಾರೆ. ವಿಜಯೇಂದ್ರ ಉಪಮುಖ್ಯಮಂತ್ರಿ ಆಗಬೇಕು ಅಂತಿದ್ದರು. ಅದಕ್ಕೆ ಅಮಿತ್ ಶಾ ಬಳಿ ಡಿಕೆಶಿಯನ್ನು ಕರೆದುಕೊಂಡು ಹೋಗಿದ್ದರು. ಆದರೆ, ಹೈಕಮಾಂಡ್ ಅದನ್ನು ರಿಜೆಕ್ಟ್ ಮಾಡಿತ್ತು. ಬಿಜೆಪಿಯವರೇ ಈ ಮಾತು ನನಗೆ ಹೇಳಿದ್ರು. ಆ ನಂತರ ಜೋಶಿಯವರು ಅಮಿತ್ ಶಾರ ಸೂಚನೆ ಮೇರೆಗೆ ನಾವು ಯಾರನ್ನೂ ಸೇರಿಸಿಕೊಳ್ತಿಲ್ಲ ಅಂತ ಹೇಳಿದ್ರು ಎಂದು ತಿಳಿಸಿದರು.
ಡಿಸೆಂಬರ್ 19ಕ್ಕೆ ಕಾಂಗ್ರೆಸ್ನವರು ದೆಹಲಿಗೆ ಹೋಗ್ತಿದ್ದಾರೆ. ಈಗ ಇಲ್ಲಿ ಗುಂಪು ಸಭೆಗಳು, ಡಿನ್ನರ್ ಸಭೆಗಳು ನಡೀತಿವೆ. ಬೆಂಬಲ ಯಾಚನೆ ಮಾಡಲು ಪ್ರತ್ಯೇಕ ಸಭೆಗಳು ನಡೀತಿವೆ. ಇನ್ನರ್ ಮತ್ತು ಡಿನ್ನರ್ ಸಭೆಗಳು ನಡೀತಿವೆ. ಡಿ.19ನೇ ತಾರೀಖಿನ ಬಳಿಕ ಎಲ್ಲವೂ ಗೊತ್ತಾಗುತ್ತದೆ ಎಂದರು.
ಸುವರ್ಣಸೌಧದ ಆರ್.ಅಶೋಕ್ ಕೊಠಡಿಯಲ್ಲಿ ಯತ್ನಾಳ್ ಜೊತೆ ಸುನೀಲ್ ಕುಮಾರ್ ಮತ್ತಿತರರು ಕ್ಲೋಸ್ ಡೋರ್ ಸಭೆ ನಡೆಸಿದ ವಿಚಾರವಾಗಿ ಪ್ರತಿಕ್ರಿಯಿಸಿ, ಮೊನ್ನೆ ಬಿಜೆಪಿಯ ಕೆಲವು ಶಾಸಕರು ನನ್ನೊಂದಿಗೆ ಮಾತಾಡಿದ್ರು. ಬಿಜೆಪಿಗೆ ನೀವು ಬನ್ನಿ ಅಂದ್ರು. ನಿಮ್ಮಂಥ ನಾಯಕರ ಅಗತ್ಯ ಇದೆ ಬನ್ನಿ ಅಂದ್ರು. ನಾನು ಹಾಗೆ ಬರಲ್ಲ, ದೊಡ್ಡ ಸ್ಥಾನ ಕೊಡಿ ಅಂದಿದ್ದೇನೆ. ದೊಡ್ಡ ಸ್ಥಾನ ಅಂದ್ರೆ ರಾಜ್ಯಾಧ್ಯಕ್ಷ ಹುದ್ದೆ ಅಥವಾ ವಿಪಕ್ಷ ನಾಯಕನ ಹುದ್ದೆ. ನಾನು ಶಾಸಕನಾಗಿಯೇ ವಾಪಸ್ ಹೋಗಲ್ಲ, ಸ್ಥಾನ ಕೊಟ್ರೆ ಹೋಗ್ತೇನೆ. ಇಲ್ಲ ಹಿಂದಿನ ಸಾಲಿನಲ್ಲಿ ಕುಳಿತುಕೊಂಡ್ರೆ ಬರಲ್ಲ ಎಂದಿದ್ದೇನೆ ಎಂದು ತಿಳಿಸಿದರು.






