ಆರೋಗ್ಯ

ಡಯಾಗ್ನಾಸ್ಟಿಕ್ ಸೆಂಟರ್‌ನಲ್ಲಿ ಮುಖಕ್ಕೆ ಪೆಪ್ಪರ್ ಸ್ಪ್ರೇ ಹೊಡೆದು ಲೈಂಗಿಕ ದೌರ್ಜನ್ಯ ಎಸಗಿದ ಡಾಕ್ಟರ್: ಎಫ್‌ಐಆರ್ ದಾಖಲು

Views: 68

ಕನ್ನಡ ಕರಾವಳಿ ಸುದ್ದಿ: ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಪ್ರಜ್ಞೆ ತಪ್ಪಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ವೈದ್ಯರೊಬ್ಬರ ವಿರುದ್ಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಸಹಕಾರ ನಗರದಲ್ಲಿನ ಡಯಾಗ್ನಾಸ್ಟಿಕ್ ಸೆಂಟರ್‌ವೊಂದರಲ್ಲಿ ವೈದ್ಯರಾಗಿರುವ ಯುವರಾಜ್ ಮನೋಹರ್ ಎಂಬುವವರ ವಿರುದ್ಧ ಆರೋಪ ಕೇಳಿ ಬಂದಿದ್ದು, 30 ವರ್ಷದ ಸಂತ್ರಸ್ತ ಯುವತಿ ನೀಡಿರುವ ದೂರಿನನ್ವಯ ಭಾರತೀಯ ನ್ಯಾಯ ಸಂಹಿತೆಯ ಅತ್ಯಾಚಾರ ಮತ್ತು ಬೆದರಿಕೆ ಕಾಯ್ದೆಗಳು ಹಾಗೂ ಪರಿಶಿಷ್ಟ ಜಾತಿ & ಪಂಗಡಗಳ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ‌.

ಸಂತ್ರಸ್ತ ಯುವತಿಯೂ ಅದೇ ಡಯಾಗ್ನಾಸ್ಟಿಕ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಕಳೆದ ವರ್ಷ ಡಿಸೆಂಬರ್ 15ರಂದು ಬೆಳಗ್ಗೆ ಕಚೇರಿಯಲ್ಲಿದ್ದಾಗ ಫೈಲ್‌ಗಳನ್ನ ಹುಡುಕುವ ನೆಪದಲ್ಲಿ ಡಯಾಗ್ನಾಸ್ಟಿಕ್ ಸೆಂಟರ್‌ನ ಮೊದಲನೇ ಮಹಡಿಗೆ ಕರೆದೊಯ್ದಿದ್ದ ಆರೋಪಿ ಮುಖಕ್ಕೆ ಪೆಪ್ಪರ್ ಸ್ಪ್ರೇ ಹೊಡೆದಿದ್ದಾನೆ‌. ಅಸ್ವಸ್ಥಗೊಂಡು ಪ್ರಜ್ಞೆ ಕಳೆದುಕೊಂಡಾಗ ಅತ್ಯಾಚಾರ ಎಸಗಿ, ಇಡೀ ಕೃತ್ಯವನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಎಚ್ಚರಗೊಂಡ ಬಳಿಕ ಕೃತ್ಯದ ಬಗ್ಗೆ ಪ್ರಶ್ನಿಸಿದಾಗ, ‘ತಾನು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ’ ಬೆದರಿಸಿದ್ದಾನೆ. ಬಳಿಕ ಅಮೃತನಗರದಲ್ಲಿ ಬಾಡಿಗೆ ಮನೆ ಮಾಡಿಕೊಟ್ಟು ತನ್ನ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವರ್ಷ ಜುಲೈ 2ರಂದು ತನ್ನ ಜಾತಿಯ ಬಗ್ಗೆ ತಿಳಿದ ನಂತರ ಅವ್ಯಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ, ಇನ್ಮುಂದೆ ಕೆಲಸಕ್ಕೆ ಬರಬಾರದೆಂದು ಬೆದರಿಕೆ ಹಾಕಿ ಕಳುಹಿಸಿದ್ದಾನೆ ಎಂದು ಸಂತ್ರಸ್ತೆ ತನ್ನ ದೂರಿನಲ್ಲಿ ಆರೋಪಿಸಿದ್ದಾಳೆ.

ಸಂತ್ರಸ್ತೆ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related Articles

Back to top button
error: Content is protected !!