ಔಷಧ ದಂಧೆ ಪ್ರಕರಣ: ನಕಲಿ ಔಷಧಕ್ಕೆ ಅಸಲಿ ಲೇಬಲ್!
Views: 12
ಕನ್ನಡ ಕರಾವಳಿ ಸುದ್ದಿ: ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಭಾರಿ ನಕಲಿ ಔಷಧ ದಂಧೆ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ ತೀವ್ರಗೊಳಿಸಿದ್ದು ಪ್ರಮುಖ ಆರೋಪಿ ಪ್ರಶಾಂತ್‌ನನ್ನು ವಿಚಾರಣೆಗೆ ಒಳಪಡಿಸಿದ ಬೆನ್ನಲ್ಲೇ ಅಂತರರಾಷ್ಟ್ರೀಯ ಮಟ್ಟದ ನೆಟ್‌ವರ್ಕ್ ಮತ್ತು ಮತ್ತಷ್ಟು ಆಘಾತಕಾರಿ ವಿಚಾರಗಳು ಬೆಳಕಿಗೆ ಬಂದಿವೆ.
ಆರೋಪಿ ಪ್ರಶಾಂತ್ ಜಾಗತಿಕ ಮಟ್ಟದ ಪ್ರಸಿದ್ಧ ‘ಫೈಜರ್’ ಕಂಪನಿಯ ಒರಿಜಿನಲ್ ಲೇಬಲ್‌ಗಳನ್ನು ತರುವುದಕ್ಕಾಗಿಯೇ ವರ್ಷದಲ್ಲಿ ಹತ್ತಾರು ಬಾರಿ ಟರ್ಕಿಗೆ ಪ್ರಯಾಣಿಸುತ್ತಿದ್ದ ಎಂಬ ಸತ್ಯ ತನಿಖೆಯಲ್ಲಿ ಬಹಿರಂಗವಾಗಿದೆ. ಪದೇಪದೇ ಟರ್ಕಿಗೆ ಭೇಟಿ ನೀಡುತ್ತಿದ್ದ ಕಾರಣಕ್ಕೆ ಆತನ ಟರ್ಕಿ ವೀಸಾವನ್ನು ರದ್ದುಗೊಳಿಸಲಾಗಿತ್ತು. ಆದರೂ ಧೃತಿಗೆಡದ ಆರೋಪಿ, ಟರ್ಕಿಯ ನೆರೆಹೊರೆಯ ದೇಶಗಳಾದ ಅಜರ್‌ಬೈಜಾನ್ ಸೇರಿದಂತೆ ಹಲವು ರಾಷ್ಟ್ರಗಳಿಗೆ ತೆರಳಿ, ಅಲ್ಲಿನ ಮಧ್ಯವರ್ತಿಗಳ ಮೂಲಕ ಫೈಜರ್ ಕಂಪನಿಯ ಅಸಲಿ ಲೇಬಲ್‌ಗಳನ್ನು ಭಾರತಕ್ಕೆ ತರಿಸಿಕೊಳ್ಳುತ್ತಿದ್ದ.
ವಿದೇಶಿ ಮಧ್ಯವರ್ತಿಗಳಿಂದ ತರಿಸಿಕೊಳ್ಳುತ್ತಿದ್ದ ಒರಿಜಿನಲ್ ಲೇಬಲ್‌ಗಳನ್ನು ಇಲ್ಲಿ ತಯಾರಿಸಲಾಗುತ್ತಿದ್ದ ನಕಲಿ ಔಷಧಗಳಿಗೆ ಹಚ್ಚಿ ಗ್ಯಾಂಗ್ ಪ್ಯಾಕ್ ಮಾಡುತ್ತಿತ್ತು. ಅಧಿಕಾರಿಗಳು ಅಥವಾ ಆಸ್ಪತ್ರೆಗಳ ಸಿಬ್ಬಂದಿಗೆ ಅನುಮಾನ ಬಾರದಂತೆ ತಡೆಯಲು, ಅಸಲಿ ಔಷಧಗಳ ಬಾಕ್ಸ್ ಮಧ್ಯೆ ನಕಲಿ ಔಷಧಗಳನ್ನು ಮಿಕ್ಸ್ ಮಾಡಿ ಪೂರೈಕೆ ಮಾಡಲಾಗುತ್ತಿತ್ತು. ಈ ಅಂತರರಾಷ್ಟ್ರೀಯ ಮಟ್ಟದ ಜಾಲದ ಕಳ್ಳಾಟವನ್ನು ಕಂಡು ತನಿಖಾಧಿಕಾರಿಗಳೇ ಆಶ್ಚರ್ಯಚಕಿತರಾಗಿದ್ದಾರೆ.
ಅಜರ್‌ಬೈಜಾನ್‌ನಲ್ಲಿದ್ದ ಪ್ರಶಾಂತ್ ವಿರುದ್ಧ ಎಸ್‌ಐಟಿ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿತ್ತು. ಸೆಪ್ಟೆಂಬರ್ 28ರಂದು ಈತ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಅರೈವಲ್ ಗೇಟ್‌ನಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಳಿಕ ಆರೋಪಿಯನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಎಸಿಪಿ ಅಂಜನ್ ಕುಮಾರ್ ನೇತೃತ್ವದ ತಂಡಕ್ಕೆ ಹಸ್ತಾಂತರಿಸಲಾಗಿದೆ.
ಪ್ರಕರಣದಲ್ಲಿ ಈಗಾಗಲೇ ಬಂಧಿತನಾಗಿರುವ ಮತ್ತೊಬ್ಬ ಪ್ರಮುಖ ಆರೋಪಿ ವೀರೇಶ್ ಜೈನ್, ನಕಲಿ ಔಷಧಗಳ ಉತ್ಪಾದನೆ ಮತ್ತು ವಿತರಣಾ ಜಾಲವನ್ನು ನಿರ್ವಹಿಸುತ್ತಿದ್ದ. ಈತ ಬೆಂಗಳೂರಿನ ಪ್ರಮುಖ ಆಸ್ಪತ್ರೆಗಳು ಮತ್ತು ಮೆಡಿಕಲ್ ಶಾಪ್‌ಗಳಿಗೆ ನಕಲಿ ಔಷಧಗಳನ್ನು ಸರಬರಾಜು ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಈ ನಕಲಿ ಔಷಧ ಜಾಲವು ವಾರ್ಷಿಕ ಸುಮಾರು ₹15 ಕೋಟಿಗೂ ಅಧಿಕ ಮೊತ್ತದ ವಹಿವಾಟು ನಡೆಸುತ್ತಿತ್ತು ಎಂದು ಎಸ್‌ಐಟಿ ಅಧಿಕಾರಿಗಳು ಅಂದಾಜಿಸಿದ್ದಾರೆ.
250ಕ್ಕೂ ಅಧಿಕ ಔಷಧಗಳ ಪಟ್ಟಿ
ರಾಜ್ಯ ಔಷಧ ಆಡಳಿತ ಇಲಾಖೆ ಪಟ್ಟಿ ಮಾಡಿರುವಂತೆ ಕ್ರಿಟಿಕೇರ್ ತಯಾರಿಸಿರುವ ‘ಗಫಿಪೊಲ್’ (ಕ್ಯಾನ್ಸರ್ ಔಷಧ) ಆಸ್ಪತ್ರೆಯ ನೈಜ ಖರೀದಿ ಬೆಲೆ ಕೇವಲ 86 ರು. ಆಗಿದ್ದರೆ, ರೋಗಿಗೆ 4,528 ರು. ಬೆಲೆಯಲ್ಲಿ ಮಾರಲಾಗಿದೆ. ಅಂದರೆ, ಖರೀದಿ ದರಕ್ಕಿಂತ ಸುಮಾರು 52.65 ಪಟ್ಟು ಅಧಿಕ ಬೆಲೆಗೆ ಮಾರಲಾಗಿದೆ. ಗುಫಿ ಕಂಪನಿಯ ‘ಗುಫಿಸೈಕಲ್ 50’ ಚುಚ್ಚುಮದ್ದಿನ ಖರೀದಿ ಬೆಲೆ 160 ರು. ಇದ್ದರೆ, ರೋಗಿಗಳಿಗೆ 7,110 ರು.ಗೆ ಮಾರಾಟ ಮಾಡಲಾಗುತ್ತಿದೆ (44.44 ಪಟ್ಟು ಹೆಚ್ಚು). ಅದೇ ರೀತಿ, ಸಾಮಾನ್ಯ ಬಳಕೆಯ ‘ಇನ್ಸುಶಿನ್’ ಐವಿ ಸೆಟ್‌ಗಳ ಖರೀದಿ ಬೆಲೆ 8.35 ರು. ಇದ್ದರೆ, ರೋಗಿಗಳಿಗೆ 248 ರು. ನಂತೆ ದರ ವಿಧಿಸಲಾಗುತ್ತಿದೆ. ಸಾಮಾನ್ಯ ಜ್ವರದಂತಹ ಚಿಕಿತ್ಸೆಗೆ ನೀಡಲಾಗುವ ಎಕ್ಕಿಮೊಲ್ ಐವಿ’ ನೈಜ ದರ 32.10 ರು. ಆಗಿದ್ದರೂ ರೋಗಿಗಳಿಗೆ 826.80 ರು. ಭಾರಿ ಬೆಲೆಯಲ್ಲಿ ನೀಡಲಾಗುತ್ತಿದೆ. ಇಂತಹ 250ಕ್ಕೂ ಅಧಿಕ ಔಷಧ, ಉಪಕರಣಗಳ ಪಟ್ಟಿಯನ್ನು ರಾಜ್ಯ ಔಷಧ ಆಡಳಿತ ಇಲಾಖೆ ತಯಾರಿಸಿ ಎನ್ ಪಿಪಿಎಗೆ ಕಳಿಸಿದೆ.






