ಇತರೆ

ಪ್ರೀತಿಸಿ ಮದುವೆಯಾದ ಎರಡೇ ತಿಂಗಳಿಗೆ ನವ ದಂಪತಿ ರಸ್ತೆ ಅಪಘಾತದಲ್ಲಿ ದುರ್ಮರಣ

Views: 23

ಕನ್ನಡ ಕರಾವಳಿ ಸುದ್ದಿ: ಪ್ರೀತಿಸಿ ಮದುವೆಯಾದ ಎರಡೇ ತಿಂಗಳಿಗೆ ನವ ದಂಪತಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ಶಿವಮೊಗ್ಗ ಹೊರವಲಯದ ರಿಂಗ್ ರಸ್ತೆಯಲ್ಲಿ ನಡೆದಿದೆ.

ಕಿರಣ್(28) ಮತ್ತು ಸೌಮ್ಯ(25) ಮೃತರು.

ಶರಾವತಿ ನಗರದ ಹಂದಿಜೋಗಿ ಕ್ಯಾಂಪ್ನ ಕಿರಣ್ ಹಾಗೂ ಗೋವಿಂದಪುರದ ನಿವಾಸಿ ಸೌಮ್ಯ ಪ್ರೀತಿಸಿ ಮದುವೆಯಾಗಿದ್ದರು. ಕಿರಣ್ ವಿರುದ್ಧ ಅವರ ಅತ್ತಿಗೆ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಸಂಬಂಧ ಪೊಲೀಸರು ಕರೆ ಮಾಡಿದ್ದಕ್ಕೆ ಕಿರಣ್, ಗೋವಿಂದಪುರಕ್ಕೆ ಹೋಗಿ ಶನಿವಾರ ಪತ್ನಿ ಜತೆ ವಾಪಸ್ಸಾಗುತ್ತಿದ್ದಾಗ ಪೂದಾರ್ ಶಾಲೆಯ ಬಳಿ‌ ತಿರುವಿನಲ್ಲಿ ಡಸ್ಟರ್ ಕಾರು ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಅಪಘಾತದ ಬಳಿಕ ಚಾಲಕ ಕಾರು ಬಿಟ್ಟು ಪರಾರಿಯಾಗಿದ್ದಾನೆ‌. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಚಾಲಕನಿಗೆ ಶೋಧ ನಡೆಸುತ್ತಿದ್ದಾರೆ.

ಕಿರಣ್ ಮತ್ತು ಸೌಮ್ಯ ಪ್ರೀತಿಸಿ ಮದುವೆಯಾಗಿದ್ದ ಕಾರಣ ಸೌಮ್ಯ ಕುಟುಂಬಸ್ಥರು ಕಿರಣ್ ಮನೆಗೆ ಹೋಗಿರಲಿಲ್ಲ. ಇದೀಗ ಮಗಳು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಮೃತದೇಹವನ್ನು ತಮಗೆ ಕೊಡಬೇಕೆಂದು ಶವಾಗಾರದ ಮುಂದೆ ಕಿರಣ್ ಕುಟುಂಬಸ್ಥರೊಂದಿಗೆ ಮಾತಿ‌ನ ಚಕಮಕಿ ನಡೆಸಿದರು. ಇಬ್ಬರ ಮೃತದೇಹಗಳನ್ನು ಕಿರಣ್ ಕುಟುಂಬಕ್ಕೆ ಪೊಲೀಸರು ಹಸ್ತಾಂತರಿಸಿದ್ದಾರೆ‌.

ಈ ಕುರಿತು ಮಾತನಾಡಿದ ಕಿರಣ್ ಸಂಬಂಧಿ ಲತಾ ಎಂಬವರು, “ಕಿರಣ್ ಅವರು ಮಹಾನಗರ ಪಾಲಿಕೆಯಲ್ಲಿ ಹೊರಗುತ್ತಿಗೆ ಪೌರ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು‌‌. ಸೌಮ್ಯರನ್ನು ಪ್ರೀತಿಸಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದರು. ಕಿರಣ್ ಅವರ ಅತ್ತಿಗೆ ಹಾಗೂ ಸೌಮ್ಯ ಅವರ ತಂದೆ – ತಾಯಿ ಬಂದು ಕಿರಣ್ ಬಳಿ ಜಗಳವಾಡಿದ್ದರು. ನಂತರ ಕಿರಣ್ ವಿರುದ್ಧ ದೊಡ್ಡಪೇಟೆಯಲ್ಲಿ ದೂರು ನೀಡಿದ್ದರು. ಈ ದೂರಿನನ್ವಯ ಪೊಲೀಸರು ಕಿರಣ್ಗೆ ಫೋನ್ ಮಾಡಿ ಠಾಣೆ ಬಳಿ ಬರಲು ಹೇಳಿದ್ದಾರೆ. ಈ ವಿಚಾರವನ್ನು ಕಿರಣ್ ತನ್ನ ತಾಯಿಗೆ ಹೇಳಿದಾಗ, ಅವರು ಅತ್ತಿಗೆ ಹಾಗೂ ಅವರ ಕುಟುಂಬಸ್ಥರ ವಿರುದ್ದ ದೂರು ನೀಡುವಂತೆ ತಿಳಿಸಿದ್ದಾರೆ. ಠಾಣೆ ಬಳಿ ಹೋದಾಗ ದೂರು ನೀಡಿದವರು ಅಲ್ಲೇ ಇದ್ದ ಕಾರಣಕ್ಕೆ ಭಯಗೊಂಡ ಕಿರಣ್, ಸೌಮ್ಯ ಜೊತೆ ಗೋವಿಂದಪುರಕ್ಕೆ ಹೋಗಿದ್ದಾರೆ‌. ಅಲ್ಲಿ ಆಕೆಯ ತಾಯಿ ಮನೆಯಲ್ಲಿಲ್ಲದ ಹಿನ್ನೆಲೆಯಲ್ಲಿ ವಾಪಸ್ ನಗರಕ್ಕೆ ಬರುತ್ತಿದ್ದಾಗ ವೇಗವಾಗಿ ಬಂದ ಡಸ್ಟರ್ ಕಾರು ಸ್ಕೂಟಿಗೆ ಡಿಕ್ಕಿ ಹೊಡೆದಿದೆ” ಎಂದು ಹೇಳಿದರು.

 

Related Articles

Back to top button
error: Content is protected !!