ಆರೋಗ್ಯ

ಭ್ರೂಣಹತ್ಯೆ ಬೃಹತ್ ಜಾಲ ಪತ್ತೆ: ಗರ್ಭಿಣಿಯಂತೆ ವೇಷತೊಟ್ಟು ಕಾರ್ಯಾಚರಣೆ ನಡೆಸಿದ ಅಧಿಕಾರಿ

Views: 54

ಕನ್ನಡ ಕರಾವಳಿ ಸುದ್ದಿ: ಭ್ರೂಣಹತ್ಯೆ ಮತ್ತು ಭ್ರೂಣಲಿಂಗ ಜಾಲ ಪತ್ತೆಹಚ್ಚಲು ಮಹಿಳಾ ಅಧಿಕಾರಿಯೊಬ್ಬರು ಮಾರುವೇಷದಲ್ಲಿ ಗರ್ಭಿಣಿಯಂತೆ ನಟಿಸಿ ಕಾರ್ಯಾಚರಣೆ ನಡೆಸಿದ ಘಟನೆ ನಡೆದಿದೆ.

ಬಾಗಲಕೋಟೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಕಾರ್ಯಾಚರಣೆ ವೇಳೆ, ಮಹಾರಾಷ್ಟ್ರದ ಜತ್ತ ತಾಲೂಕಿನ ಜಾಡರ ಬಬಲಾದಿಯ ತೋಟದ ಮನೆಯಲ್ಲಿ ಅಕ್ರಮವಾಗಿ ಇರಿಸಲಾಗಿದ್ದ ಸ್ಕ್ಯಾನಿಂಗ್ ಯಂತ್ರ ಪತ್ತೆಯಾಗಿದ್ದು, ನಿಖಿಲ್ ತೇಲಿ ಹಾಗೂ ದಾನಮ್ಮ ತೇಲಿ ಎಂಬವರನ್ನು ಬಂಧಿಸಲಾಗಿದೆ.

ಜಮಖಂಡಿ ಅಸಿಸ್ಟೆಂಟ್ ಕಮಿಷನರ್ ಶ್ವೇತಾ ಬಿಡಿಕರ್ ಗರ್ಭಿಣಿಯಂತೆ, ಆರೋಗ್ಯ ಸೌಧ ಡಿಡಿ ಡಾ. ಶೋಭಾ ನಾದಿನಿಯಂತೆ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಸುವರ್ಣಾ ಕುಲಕರ್ಣಿ ತಾಯಿಯಂತೆ ವೇಷ ಧರಿಸಿ ಕಾರ್ಯಾಚರಣೆ ನಡೆಸಿದ್ದಾರೆ.

ಮಹಾಲಿಂಗಪುರದ ಕವಿತಾ ಎಂಬ ನಕಲಿ ವೈದ್ಯೆ ನೀಡಿದ ಮಾಹಿತಿಯ ಮೇರೆಗೆ ಮಹಾರಾಷ್ಟ್ರದ ಜತ್ತ ತಾಲೂಕಿನ ಜಾಡರ ಬಬಲಾದಿ, ಕರ್ಜಗಿ ಸೇರಿದಂತೆ ಹಲವೆಡೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಬೃಹತ್ ಜಾಲ ಪತ್ತೆಯಾಗಿದೆ.

ಈ ಪ್ರಕರಣದಲ್ಲಿ ನಿಖಿಲ್ ತೇಲಿ ಹಾಗೂ ದಾನಮ್ಮ ತೇಲಿ ಎಂಬ ಇಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಕ್ಯಾನಿಂಗ್ ಯಂತ್ರ, ಎಂಟಿಬಿ ಡ್ರಗ್ಸ್ ಹಾಗೂ ಎರಡು ಇಂಜೆಕ್ಷನ್‌ಗಳು ಪತ್ತೆಯಾಗಿವೆ. ಪ್ರಕರಣದ ಪ್ರಮುಖ ಆರೋಪಿ ಎಂದು ಹೇಳಲಾಗಿರುವ ಡಾ. ಸಂಜಯ್ ವಾಘ್ಮೋರೆ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಇದೇ ಪ್ರಕರಣದ ನಡುವೆ ಬಾಗಲಕೋಟೆಯಲ್ಲಿ ಡಿಹೆಚ್‌ಒ ಡಾ. ರಾಜಕುಮಾರ್ ಯರಗಲ್ ಅವರ ಪುತ್ರಿ ಅಂಕಿತಾ ಅವರ ವಿಚಾರವೂ ಈ ಪ್ರಕರಣದ ಹಿನ್ನೆಲೆಯಲ್ಲಿ ಮುನ್ನೆಲೆಗೆ ಬಂದಿದೆ. ಅಂಕಿತಾ ಯರಗಲ್ ಕಾಲೇಜಿನಲ್ಲಿ ಎಂಡಿ ವ್ಯಾಸಂಗ ಮಾಡುತ್ತಿದ್ದು, ತಾನು ವೈದ್ಯೆ ಎಂದು ವೇತನ ಪಡೆಯುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಇದೀಗ ಅಮಾನತಾದ ಡಿಹೆಚ್‌ಒ ಡಾ. ರಾಜಕುಮಾರ್ ಯರಗಲ್ ಮತ್ತು ಪ್ರಭಾರ ಡಿಹೆಚ್‌ಒ ಸುವರ್ಣಾ ಕುಲಕರ್ಣಿ ನಡುವೆ ಆರೋಪ-ಪ್ರತ್ಯಾರೋಪಗಳು ಕೇಳಿಬಂದಿವೆ. ಪ್ರಭಾರ ಡಿಹೆಚ್‌ಒ ಸುವರ್ಣಾ ಅವರು ಖಾಸಗಿ ಆಸ್ಪತ್ರೆ ಹೊಂದಿದ್ದಾರೆ ಎಂದು ಅಂಕಿತಾ ಆರೋಪಿಸಿದ್ದಾರೆ. ಇದಕ್ಕೆ ಸ್ಪಷ್ಟನೆ ನೀಡಿರುವ ಸುವರ್ಣಾ, ಆಸ್ಪತ್ರೆ ತಮ್ಮ ಪತಿ ಹೆಸರಿನಲ್ಲಿದೆ ಎಂದು ತಿಳಿಸಿದ್ದಾರೆ.

ಒಟ್ಟಾರೆ ರಾಜ್ಯದಲ್ಲಿ ಭ್ರೂಣಲಿಂಗ ಪತ್ತೆ ಮತ್ತು ಭ್ರೂಣಹತ್ಯೆಗೆ ಸಂಬಂಧಿಸಿದ ಬೃಹತ್ ಜಾಲ ಮತ್ತೆ ಸಕ್ರಿಯವಾಗಿದೆ ಎಂಬುದು ಇದರಿಂದ ಬಯಲಾಗಿದೆ.

Related Articles

Back to top button
error: Content is protected !!