ಔಷಧ ತಯಾರಿ ಕಂಪನಿಗಳು ವೈದ್ಯರಿಗೆ ನೀಡುವ ಆಮಿಷಗಳು, ಅಸಂವಿಧಾನಿಕ ಮಾರ್ಕೆಟಿಂಗ್ ಅಕ್ರಮ ತಡೆಗೆ ಸುಪ್ರೀಂ ಆದೇಶ
Views: 1
ಕನ್ನಡ ಕರಾವಳಿ ಸುದ್ದಿ : ಔಷಧ ತಯಾರಿ ಕಂಪನಿಗಳು ವೈದ್ಯರಿಗೆ ನೀಡುವ ಆಮಿಷಗಳು ಮತ್ತು ಅಸಂವಿಧಾನಿಕ ಮಾರ್ಕೆಟಿಂಗ್ ವ್ಯವಹಾರಗಳಿಗೆ ಕಡಿವಾಣ ಹಾಕಲು ಕಾನೂನುಬದ್ಧ ವ್ಯವಸ್ಥೆಯನ್ನು ತರಲು ಸುಪ್ರೀಂ ಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ.
ಈ ರೀತಿಯ ಅಕ್ರಮ ಮತ್ತು ಅನೈತಿಕ ಪ್ರಚಾರ ತಡೆಗಟ್ಟಲು ಸೂಕ್ತ ಶಿಫಾರಸುಗಳನ್ನು ನೀಡುವಂತೆ ತಜ್ಞರ ಸಮಿತಿಯೊಂದನ್ನು ರಚಿಸಲು ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.
ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪೀಠವು, ಕೇಂದ್ರ ಸರ್ಕಾರವು ತಜ್ಞರ ಸಮಿತಿಯನ್ನು ಶೀಘ್ರವೇ ರಚಿಸಬೇಕು ಎಂದು ಸೂಚಿಸಿದೆ. ಈ ಸಮಿತಿಯು ಸ್ವೀಕೃತವಾಗುವ ವಿವಿಧ ಸಲಹೆಗಳು, ಮನವಿಗಳು ಮತ್ತು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ, ಅನೈತಿಕ ಮಾರ್ಕೆಟಿಂಗ್ ತಡೆಯಲು ಪ್ರತ್ಯೇಕ ಶಾಸನಬದ್ಧ ಕಾನೂನಿನ ಅಗತ್ಯವಿದೆಯೇ ಹಾಗೂ ಅದು ಎಂತಹ ಸ್ವರೂಪದಲ್ಲಿರಬೇಕು ಎಂಬುದರ ಕುರಿತು ಕೇಂದ್ರಕ್ಕೆ ತನ್ನ ವರದಿಯನ್ನು ಸಲ್ಲಿಸಲಿದೆ. ಕೇಂದ್ರ ಸರ್ಕಾರವು ಸಮಿತಿಯ ವರದಿ ಆಧಾರಿತ ಅಫಿಡವಿಟ್ ಅನ್ನು ಸಲ್ಲಿಸಲು ಜನವರಿ 29, 2027 ರವರೆಗೆ ಸಮಯ ನಿಗದಿಪಡಿಸಲಾಗಿದೆ.
ಫಾರ್ಮಾ ಕಂಪೆನಿಗಳು ವೈದ್ಯರಿಗೆ ದುಬಾರಿ ಉಡುಗೊರೆ, ವಿದೇಶಿ ಪ್ರವಾಸ ಸೇರಿದಂತೆ ವಿವಿಧ ಆಮಿಷಗಳನ್ನು ಒಡ್ಡುವ ಅನೈತಿಕ ಮಾರುಕಟ್ಟೆ ಪದ್ಧತಿಗಳ ಸಂಪೂರ್ಣ ತಡೆಗೆ ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರ ಸರಕಾರಕ್ಕೆ ಮಹತ್ವದ ನಿರ್ದೇಶನ ನೀಡಿದೆ. ಇಂತಹ ಅಕ್ರಮಗಳನ್ನು ತಡೆಗ ಟ್ಟಲು ತತ್‌ಕ್ಷಣವೇ ತಜ್ಞರ ಸಮಿತಿಯೊಂದನ್ನು ರಚಿಸುವಂತೆ ನ್ಯಾಯಮೂರ್ತಿಗಳಾದ ವಿಕ್ರಮ್‌ನಾಥ್ ಮತ್ತು ಸಂದೀಪ್ ಮೆಹ್ರಾ ಅವರಿದ್ದ ಪೀಠವು ಆದೇಶಿಸಿದೆ.






