ಮೂಡುಬಿದಿರೆ: ಬಟ್ಟೆ ಒಣಗಿಸಲು ಹೋದಾಗ ವಿದ್ಯುತ್ ತಂತಿ ತಗುಲಿ ತಾಯಿ-ಮಗ ದಾರುಣ ಸಾವು
Views: 39
ಕನ್ನಡ ಕರಾವಳಿ ಸುದ್ದಿ: ಬಟ್ಟೆ ಒಣಗಿಸಲು ಹೋದಾಗ ವಿದ್ಯುತ್ ತಂತಿ ತಗುಲಿ ತಾಯಿ ಹಾಗೂ ಮಗ ಇಬ್ಬರೂ ದಾರುಣವಾಗಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಕೂಕಿನ ಪಾಲಡ್ಕ ಗ್ರಾಮ ಪಂಚಾಯಿತಿಯ ವರ್ಣಬೆಟ್ಟು ಎಂಬಲ್ಲಿ ಈ ಘಟನೆ ನಡೆದಿದೆ. ತಾಯಿ ಮರ್ಸಿ ಮಸ್ಕರೇನಸ್ (45), ಪುತ್ರ ಶೋನ್ ಮಸ್ಕರೇನಸ್ (18) ಮೃತ ದುರ್ದೈವಿಗಳು.
ಇಂದು ಬೆಳಿಗ್ಗೆ 7 ರಿಂದ 8 ಗಂಟೆ ನಡುವೆ ಬಟ್ಟೆ ಒಣಗಿಸುವಾಗ ಈ ದುರಂತ ಸಂಭವಿಸಿದೆ. ಬಟ್ಟೆ ಒಣಗಲು ಹಾಕುವಾಗ ಬಟ್ಟೆ ತಂತಿಗೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿದ್ದು, ಮಗ ಕರೆಂಟ್ ಶಾಕ್ ಹೊಡೆದು ಪರದಾಡುತ್ತಿದ್ದ. ಆತನನ್ನು ರಕ್ಷಿಸಲು ಹೋದ ತಾಯಿಗೂ ಕರೆಂಟ್ ಶಾಕ್ ಹೊಡೆದಿದ್ದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಶೋನ್ ಮಸ್ಕರೇನಸ್ ಮೂಡುಬಿದಿರೆ ಹೋಲಿ ರೋಸರಿ ವಿದ್ಯಾರ್ಥಿಯಾಗಿದ್ದ. ಬಟ್ಟೆ ಒಣಗಿಸುವಾಗ ವಿದ್ಯುತ್ ಅವಘಡ ಸಂಭವಿಸಿ ತಾಯಿ-ಮಗ ಇಬ್ಬರೂ ದಾರುಣ ಆಂತ್ಯಕಂಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






