ಗಂಗೊಳ್ಳಿ ಪಂಚಾಯತ್ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

Views: 86
ಕನ್ನಡ ಕರಾವಳಿ ಸುದ್ದಿ: ಸರಕಾರಿ ಕಟ್ಟಡಗಳನ್ನು ತಮ್ಮ ರಾಜಕೀಯ ಲಾಭಗೋಸ್ಕರ ಯಾವುದೇ ಸೈದ್ಧಾಂತಿಕ ಬದ್ಧತೆ ಇಲ್ಲದ ಕಾಂಗ್ರೆಸ್ ಪಕ್ಷ ಕಾನೂನುಬಾಹಿರವಾದ ಎಲ್ಲಾ ಚಟುವಟಿಕೆಗಳಿಗೆ ಅನುವು ಮಾಡಿಕೊಡಲು ಆರಂಭಿಸಿದ್ದನ್ನು ವಿರೋಧಿಸುತ್ತೇವೆ. ಕಾಂಗ್ರೆಸ್ ಒಂದು ಕಡೆ ಎಸ್ಡಿಪಿಐಯನ್ನು ನಿಷೇಧಿಸಬೇಕು, ಎಸ್ಡಿಪಿಐ ಸಮಾಜಘಾತುಕ ಶಕ್ತಿ, ದೇಶದ್ರೋಹಿಗಳಿಗೆ ಬೆಂಬಲ ನೀಡುತ್ತಿದೆ ಅನ್ನುವುದನ್ನು ದೇಶಾದ್ಯಂತ ಹೇಳುತ್ತಿದೆ. ಆದರೆ ಅಧಿಕಾರಕ್ಕೋಸ್ಕರ, ಪಂಚಾಯತ್ ಆಡಳಿತಕ್ಕೋಸ್ಕರ ಅದರ ಜತೆ ಅನೈತಿಕ ಸಂಬಂಧ ಮಾಡಿಕೊಳ್ಳುತ್ತದೆ. ಸೈದ್ಧಾಂತಿಕತೆ ಮಾರಾಟ ಮಾಡಿ, ಅಧಿಕಾರ ಮಾತ್ರ ಮುಖ್ಯ ಎಂದು ಕಾಂಗ್ರೆಸ್ ತೋರಿಸಿಕೊಟ್ಟಿದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.

ಹಿಂದೂ ಹಿತರಕ್ಷಣಾ ಸಮಿತಿ ಗಂಗೊಳ್ಳಿ ಇದರ ವತಿಯಿಂದ, ಗಂಗೊಳ್ಳಿ ಗ್ರಾಮ ಪಂಚಾಯತ್ ಕಚೇರಿಯ ಒಳಗೆ ಪಂಚಾಯತ್ ಉಪಾಧ್ಯಕ್ಷ ಅಧಿಕಾರ ಸ್ವೀಕಾರ ಮಾಡುವ ಸಂದರ್ಭ ಮೌಲ್ವಿಗಳ ಮೂಲಕ ನಮಾಜ್ ಮಾಡಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಗ್ರಾಮ ಪಂಚಾಯತ್ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಬೈಂದೂರು ಕ್ಷೇತ್ರದಲ್ಲಿ ಕಳೆದ ಒಂದೂವರೆ ವರ್ಷದಿಂದ ಗೋ ಕಳ್ಳತನ ಪ್ರಕರಣಗಳು ತುಂಬಾ ದಾಖಲಾಗುತ್ತಿದೆ. ಪರೋಕ್ಷವಾಗಿ ಇದರ ಹಿಂದೆ ಯಾರಿದ್ದಾರೆ ಎನ್ನುವುದು ತಿಳಿದಿರುವ ವಿಚಾರ. ಇಂತಹ ಎಸ್ಡಿಪಿಐಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತ ಮಾಡಿಕೊಂಡು ಅವರ ಜತೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಗಂಗೊಳ್ಳಿ ಗ್ರಾ.ಪಂ. ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಅಧಿಕಾರಕ್ಕೋಸ್ಕರ ತುಷ್ಟೀಕರಣ ಮಾಡುವುದನ್ನು ಸಮಾಜ ಸಹಿಸುವುದಿಲ್ಲ ಎಂದರು.
ಮನವಿಯನ್ನು ಕುಂದಾಪುರ ತಹಶೀಲ್ದಾರ್ ಮಲ್ಲಿಕಾರ್ಜುನ್ ಮತ್ತು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಡಾ| ರವಿ ಕುಮಾರ್ ಹುಕ್ಕೇರಿ ಅವರಿಗೆ ಸಲ್ಲಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.

ಪ್ರಾರ್ಥನಾ ಜಟಾಪಟಿ: ಶುಕ್ರವಾರ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ ಜಯಂತಿ ಖಾರ್ವಿ ಪಂಚಾಯಿತಿನಲ್ಲಿ ಗಣಪತಿ ಹೋಮ ನಡೆಸಿ ಅಧಿಕಾರ ಸ್ವೀಕರಿಸಿದ್ದಾರೆ. ಇಸ್ಲಾಂ ಪ್ರಾರ್ಥನೆ ನಡೆಸಿದ್ದಕ್ಕೆ ಹಿಂದೂ ಪದ್ಧತಿಯಂತೆ ಹೋಮ ನಡೆಸಲಾಗಿದೆ ಎಂದು ವ್ಯಾಪಕ ಪ್ರಚಾರ ನಡೆದಿತ್ತು.
ಈ ಕುರಿತು ಜಾಲತಾಣದಲ್ಲಿ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.






