ಕರ್ನಾಟಕ ಸ್ಟೇಟ್ ಟೈಲರ್ ಅಶೋಸಿಯೇಷನ್ ನ ಕೋಟೇಶ್ವರ ವಲಯ ಸಮಿತಿಯ ಮಹಾಸಭೆ
ಟೈಲರ್ ಗಳು ನವ ನಾಗರಿಕತೆಯ ಮಣಿ ಮುಕುಟದಂತೆ - ಪ್ರೇಮಾನಂದ ಶೆಟ್ಟಿ

Views: 224
ಕನ್ನಡ ಕರಾವಳಿ ಸುದ್ದಿ:ಸುಸಂಸ್ಕೃತ ನಾಗರಿಕ ಸಮಾಜಕ್ಕೆ ಟೈಲರ್ ಗಳ ಕೊಡುಗೆ ಅನನ್ಯವಾದುದು. ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣದ ಶಿಲ್ಪಿಗಳು ಟೈಲರ್ ಗಳು. ಅವರು ನವ ನಾಗರಿಕತೆಯ ಮಣಿ ಮುಕುಟ. ಸಮಾಜದ ಅತಿ ಅಗತ್ಯ ಕಾರ್ಯಗಳನ್ನು ನಿರ್ವಹಿಸುವ ವಿವಿಧ ಕುಶಲ ಕರ್ಮಿಗಳನ್ನು ವಂದಿಸುವ ಸಾಲು ರುದ್ರ ಮಂತ್ರದಲ್ಲಿ ಬರುತ್ತದೆ. ಅಲ್ಲಿ ದರ್ಜಿಗಳನ್ನೂ ಉಲ್ಲೇಖಸಿ ನಮಸ್ಕರಿಸಲಾಗಿದೆ. ಹೀಗೆ ಪ್ರಾಚೀನವಾದ ಟೈಲರಿಂಗ್ ವೃತ್ತಿ ಇಂದು ಹಲವು ಆಯಾಮಗಳನ್ನು ಹೊಂದಿ ಅಭಿವೃದ್ಧಿ ಹೊಂದಿದ್ದರೂ ಟೈಲರ್ ಗಳ ಬದುಕು ಹಸನಾಗಿಲ್ಲ. ಅವರು ಸಂಘಟನಾತ್ಮಕವಾಗಿ ಬೆಳೆಯಬೇಕು – ಎಂದು ಹಿರಿಯ ಸಂಘ ಪ್ರಚಾರಕ, ಕಟ್ಕೆರೆ ನಂದಗೋಕುಲ ಶಿಶು ಮಂದಿರದ ವ್ಯವಸ್ಥಾಪಕ ಪ್ರೇಮಾನಂದ ಶೆಟ್ಟಿ ಕರೆ ನೀಡಿದರು.
ಅವರು ಕರ್ನಾಟಕ ಸ್ಟೇಟ್ ಟೈಲರ್ ಅಶೋಸಿಯೇಷನ್ ನ ಕೋಟೇಶ್ವರ ವಲಯ ಸಮಿತಿಯ ಮಹಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿ ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಗಿಣಿ ದೇವಾಡಿಗ ಮಾತನಾಡಿ, ಟೈಲರಿಂಗ್ ಇಂದು ಒಂದು ಉದ್ಯಮದ ಸ್ವರೂಪ ಪಡೆದಿದೆ. ಕೇಂದ್ರ ಸರ್ಕಾರ ಟೈಲರ್ ಗಳ ಅಭಿವೃದ್ಧಿಗಾಗಿ ವಿಶೇಷ ಯೋಜನೆಯನ್ನು ಜಾರಿಗೋಳಿಸಿದ್ದು, ಈ ಮೂಲಕ ಉಚಿತ ಹೊಲಿಗೆ ಯಂತ್ರಗಳನ್ನು ನೀಡಲಾಗುತ್ತದೆ. ಉಡುಪಿ ಜಿಲ್ಲೆಯಿಂದ ಈ ಬಗ್ಗೆ ನಾಲ್ಕು ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಕೋಟೇಶ್ವರ ಪಂಚಾಯತ್ ವ್ಯಾಪ್ತಿಯಿಂದ ಇನ್ನೂರೈವತ್ತಕ್ಕೂ ಹೆಚ್ಚು ಅರ್ಜಿಗಳನ್ನು ಶಿಫಾರಸು ಮಾಡಿ ಕಳಿಸಲಾಗಿದೆ ಎಂಬ ಮಾಹಿತಿಯನ್ನು ನೀಡಿದರು. ಈ ಯೋಜನೆಯಡಿ ಟೈಲರ್ ಗಳೆಲ್ಲರೂ ಅರ್ಜಿ ಸಲ್ಲಿಸಬೇಕು ಎಂದೂ ಅವರು ಮನವಿ ಮಾಡಿದರು.
ಕುಂದಾಪುರ ಕ್ಷೇತ್ರ ಸಮಿತಿಯ ಅಧ್ಯಕ್ಷ ರಾಜೀವ್ ಆರ್. ಪೂಜಾರಿ ಮಾತನಾಡಿ, 850 ಮಂದಿ ಸದಸ್ಯರನ್ನು ಹೊಂದಿರುವ ಕೋಟೇಶ್ವರ ವಲಯ ಸಮಿತಿಯು ಉಡುಪಿ ಜಿಲ್ಲೆಯಲ್ಲೇ ದೊಡ್ಡ ವಲಯ. ಎಲ್ಲ ಸದಸ್ಯರೂ ವೃತ್ತಿ ಘನತೆಯನ್ನು ಕಾಯ್ದುಕೊಳ್ಳುವುದರೊಂದಿಗೆ ಸಮಯ ಪಾಲನೆಗೂ ಆದ್ಯತೆ ನೀಡಬೇಕು ಎಂದು ಸಲಹೆ ಮಾಡಿದರು.
ಜಿಲ್ಲಾ ಸಮಿತಿ ಸದಸ್ಯ ಕೆ ಎನ್ ರಾಘವ ಶೇರೆಗಾರ್, ಜಿಲ್ಲಾ ಸಮಿತಿ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ, ಕುಂದಾಪುರ ಕ್ಷೇತ್ರ ಸಮಿತಿ ಕಾರ್ಯದರ್ಶಿ ಹೇಮಾ ಆರ್. ಮತ್ತು ಕ್ಷೇತ್ರ ಸಮಿತಿ ಕೋಶಾಧಿಕಾರಿ ಅರುಣ್ ಖಾರ್ವಿ ಶುಭ ಕೋರಿದರು.
ಹಿರಿಯ ವೃತ್ತಿ ಬಾಂಧವರಾದ ಶ್ರೀಧರ್ ಜೋಗಿ ಕೋಟೇಶ್ವರ, ಹೆರಿಯ ಟೈಲರ್, ಜನ್ನಾಡಿ ಮತ್ತು ಅನ್ನಪೂರ್ಣ, ಕೋಟೇಶ್ವರ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಜಯಲಕ್ಷ್ಮೀ ಆಚಾರ್ಯ, ಜ್ಯೋತಿ ಮತ್ತು ರೂಪಾ ಗೋಪಾಲ್ ಸನ್ಮಾನ ಪತ್ರಗಳನ್ನು ಓದಿದರು. ಸನ್ಮಾನಿತರ ಪರವಾಗಿ ಶ್ರೀಧರ್ ಜೋಗಿ ಮಾತನಾಡಿದರು. ಟೈಲರ್ಸ್ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸಹಾಯ ಧನವನ್ನು ನೀಡಲಾಯಿತು. ರೇಖಾ ಕೊರ್ಗಿ ಪಟ್ಟಿ ವಾಚಿಸಿದರು.
ಕೋಟೇಶ್ವರ ವಲಯ ಸಮಿತಿ ಅಧ್ಯಕ್ಷ ದಿನೇಶ್ ಕುಲಾಲ ಮೊಳಹಳ್ಳಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸವಿತಾ ಮತ್ತು ವೀಣಾ ವಾರ್ಷಿಕ ವರದಿ ಹಾಗೂ ಆಯ – ವ್ಯಯ ವಿವರ ಸಲ್ಲಿಸಿದರು. ಕೋಟೇಶ್ವರ ವಲಯ ಸಮಿತಿ ಮಾಜಿ ಅಧ್ಯಕ್ಷ ಸೀತಾರಾಮ ಆಚಾರ್ಯ, ಕುಂದಾಪುರ ನಗರ ಸಮಿತಿಯ ಗೋಪಾಲ್, ಗುತ್ತಿಗೆದಾರ ಸುಧೀರ್ ಕುಮಾರ್ ಶೆಟ್ಟಿ, ಕೊಲ್ಲೂರು ದೇವಳ ಸಮಿತಿಯ ಮಾಜಿ ಸದಸ್ಯ ಕೆ ಪಿ ಶೇಖರ್, ಎಡಮೊಗೆ ಮಠದ ಪ್ರಧಾನ ಕಾರ್ಯದರ್ಶಿ ಕೇಶವ ಕೋಟೇಶ್ವರ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಸುಮಿತ್ರಾ ಶೇಖರ್ ಪ್ರಾರ್ಥಿಸಿದರು, ಶೀಲಾ ಸುರೇಶ್ ಸ್ವಾಗತಿಸಿದರು. ಶ್ರೀಧರ ಜೋಗಿ ಮತ್ತು ಪಲ್ಲವಿ ಕಾರ್ಯಕ್ರಮ ನಿರೂಪಿಸಿ, ಗೀತಾ ರಮೇಶ್ ವಂದಿಸಿದರು.