ರಾಜಕೀಯ

ಉಡುಪಿ ನೂತನ ಜಿಲ್ಲಾಧ್ಯಕ್ಷರ ಆಯ್ಕೆ:ಅಧಿಕಾರ ಹಸ್ತಾಂತರವಲ್ಲ, ಕಿತ್ತುಕೊಂಡದ್ದು-ನಿರ್ಗಮಿತ ಅಧ್ಯಕ್ಷ ಕಿಶೋರ್ ಕುಮಾರ್

Views: 252

ಕನ್ನಡ ಕರಾವಳಿ ಸುದ್ದಿ: ಉಡುಪಿ  ಜಿಲ್ಲಾ ನಿರ್ಗಮಿತ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಮಾತನಾಡಿ, ನಾನು ಕಾರ್ಯಕರ್ತರ ಮಧ್ಯ ಬೆಳೆದುಕೊಂಡು ಬಂದವನು,  ಪಕ್ಷಕ್ಕೆ ಅನಿವಾರ್ಯತೆ ಬಂದಾಗ ಚುನಾವಣೆಯಲ್ಲಿ ಸ್ಪರ್ಧಿಸಿ, ಸೋತಿದ್ದೇನೆ. ಅವಧಿಗೂ ಮೊದಲೇ ಅಧ್ಯಕ್ಷ ಸ್ಥಾನದಿಂದ ಇಳಿಯುವಂತೆ ಆಗಿದೆ. ಪಕ್ಷ ಸಂಘಟನೆಯಲ್ಲಿ ನಿರಂತರ ತೊಡಗಿಸಿಕೊಂಡಿದ್ದ ನಾನು ಎಂದೂ ಯಾವುದನ್ನೂ ಅಪೇಕ್ಷಿಸಿರಲಿಲ್ಲ. ಯಾರೊಂದಿಗೂ ಫೋಟೋ ತೆಗೆಸಿಕೊಂಡು ಅದನ್ನು ಸ್ಟೇಟಸ್ಸಿಗೂ ಹಾಕಿಕೊಂಡವನಲ್ಲ.

ಪಕ್ಷದ ಕಾರ್ಯಕರ್ತನಾಗಿ ನನ್ನ ಇತಿಮಿತಿಯಲ್ಲಿ ಸಂಘಟನೆಯ ಕಾರ್ಯ ಮಾಡುತ್ತಾ ಬಂದಿದ್ದೇನೆ. 16 ತಿಂಗಳು ಮಾತ್ರ ಜಿಲ್ಲಾಧ್ಯಕ್ಷನಾಗಿದ್ದು, ಇದರಲ್ಲಿ ಆರೇಳು ತಿಂಗಳ ಹಿಂದೆಯೇ ಜಿಲ್ಲಾಧ್ಯಕ್ಷರ ಬದಲಾವಣೆ ಗುಸುಗುಸು ಶುರುವಾಗಿತ್ತು. ಪಕ್ಷ ಸಂಘಟನೆಗಾಗಿ ನಾನು ಯಾರಿಂದಲೂ ದೇಣಿಗೆ ಪಡೆಯಲು ಹೋಗಿಲ್ಲ. ಜಾತಿಯ ಪ್ರಭಾವ ಪಕ್ಷದಲ್ಲೂ ಇಷ್ಟಿದೆ ಎಂಬುದು ತಿಳಿಯುತ್ತಿಲ್ಲ. ಇದು ಅಧಿಕಾರ ಹಸ್ತಾಂತರ ಅಲ್ಲ, ಅಧಿಕಾರ ಕಿತ್ತುಕೊಂಡಿರುವುದು. ಹೀಗಾಗಿ ನಾನು ಸಮ್ಮಾನ ಸ್ವೀಕರಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ನೂತನ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರು ನಿರ್ಗಮಿತ ಅಧ್ಯಕ್ಷ ಕಿಶೋ‌ರ್ ಕುಮಾರ್ ಕುಂದಾಪುರ ಅವರ ಉಪಸ್ಥಿತಿಯಲ್ಲಿ ಅಧಿಕಾರ ಸ್ವೀಕರಿಸಿದರು.

ಅನಂತರ ಮಾತನಾಡಿ, ಬೂತ್ ಮಟ್ಟದಿಂದಲೇ ಪಕ್ಷದ ಕಾರ್ಯಕರ್ತರನ್ನು ಸಂಘಟಿಸುವ ಮೂಲಕ ಪಕ್ಷ ಸಂಘಟನೆಗೆ ವಿಶೇಷ ಒತ್ತು ನೀಡಲಾಗುವುದು ಎಂದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ವಿ. ಸುನಿಲ್‌ಕುಮಾ‌ರ್ ಮಾತನಾಡಿ, ಮುಂದಿನ ದಿನಗಳು ಸವಾಲಿನದ್ದಾಗಿದ್ದು ಜನ ವಿರೋಧಿ ರಾಜ್ಯ ಸರಕಾರದ ದುರಾಡಳಿತದ ವಿರುದ್ಧ ಹೋರಾಟ ಮಾಡುವ ಜತೆಗೆ ಗ್ರಾ.ಪಂ., ತಾ.ಪಂ., ಜಿ.ಪಂ. ಚುನಾವಣೆ ಎದುರಿಸಲು ಪಕ್ಷವನ್ನು ಸಂಘಟನಾತ್ಮಕವಾಗಿ ಇನ್ನಷ್ಟು ಗಟ್ಟಿಗೊಳಿಸಬೇಕು ಎಂದರು.

ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾ‌ರ್ ಕೊಡ್ಡಿ, ಮಾಜಿ ಶಾಸಕ ಲಾಲಾಜಿ ಆ‌ರ್. ಮೆಂಡನ್, ಮಾಜಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್, ಪ್ರಧಾನ ಕಾರ್ಯದರ್ಶಿ ಉದಯ ಶೆಟ್ಟಿ, ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ರಾಜ್ಯ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಮುಖ್ ವಿಕಾಸ್ ಪುತ್ತೂರು, ಪ್ರಮುಖರಾದ ಶ್ರೀಶ ನಾಯಕ್ ಪೆರ್ಣಂಕಿಲ, ಮಟ್ಟಾರು ರತ್ನಾಕರ ಹೆಗ್ಡೆ, ಶಿಲ್ಪಾ ಜಿ. ಸುವರ್ಣ, ಶ್ರೀಕಾಂತ್ ನಾಯಕ್, ರಾಜೇಶ್‌ ಕಾವೇರಿ, ಶಿವಕುಮಾರ್‌ ಅಂಬಲಪಾಡಿ, ಸತ್ಯಾನಂದ ನಾಯಕ್‌, ಶ್ರೀನಿಧಿ ಹೆಗ್ಡೆ, ಸಂಧ್ಯಾ ರಮೇಶ್, ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಜಿಲ್ಲಾ ಮತ್ತು ಮಂಡಲ ಪದಾಧಿಕಾರಿಗಳು, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾ‌ರ್ ಶೆಟ್ಟಿ ಪ್ರಸ್ತಾವನೆಗೈದರು. ಉಪಾಧ್ಯಕ್ಷ ಪ್ರಕಾಶ್‌ ಶೆಟ್ಟಿ ಪಾದೇಬೆಟ್ಟು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ನಿರೂಪಿಸಿದರು.

 

Related Articles

Back to top button
error: Content is protected !!