ಇನ್ಮುಂದೆ ಗ್ರಾಮ ಪಂಚಾಯಿತಿ ಕಛೇರಿಯಲ್ಲೇ ಸಿಗಲಿದೆ ಜನನ-ಮರಣ ಪತ್ರ

Views: 129
ಬೆಂಗಳೂರು: ಇನ್ಮುಂದೆ ಜನನ, ಮರಣ ನೋಂದಣಿ ಪ್ರಮಾಣ ಪತ್ರವನ್ನು ಗ್ರಾಮ ಪಂಚಾಯಿತಿಯಲ್ಲೇ ನೀಡಲಾಗುತ್ತದೆ.
ಜನನ, ಮರಣ ಸಂಭವಿಸಿದ 30 ದಿನದ ಒಳಗೆ ನೋಂದಾಯಿಸಿ ಇ-ಜನ್ಮ ತಂತ್ರಾಂಶದ ಮೂಲಕ ಪ್ರಮಾಣಪತ್ರ ವಿತರಿಸಲು ಡಿಜಿಟಲ್ ಸಹಿ ಬಳಸಲಾಗುವುದು.
ಜನರು ಪದೇಪದೆ ಕೆಲಸ ಬಿಟ್ಟು ಕಚೇರಿಗಳಿಗೂ ಅಲೆಯಬೇಕಾಗಿಲ್ಲ. ನೋಂದಣಿಯೂ ಬೇಗ ನಡೆಯಲಿದೆ. ನಂತರ ಪ್ರಮಾಣ ಪತ್ರವೂ ಸಿಗಲಿದೆ. ಗ್ರಾಮ ಪಂಚಾಯಿತಿ ಕಾರ್ಯದರ್ಶಿಯವರೇ ಉಪ ನೋಂದಣಾಕಾರಿ ಆಗಿರುತ್ತಾರೆ.
ಜನನ, ಮರಣ ಸಂಭವಿಸಿದ 30 ದಿನದ ಒಳಗೆ ಪ್ರಮಾಣಪತ್ರ ಬೇಕಾದಲ್ಲಿ ಇವರೇ ವಿತರಿಸುವರು. 30 ದಿನಗಳ ನಂತರ ಗ್ರಾಮ ಲೆಕ್ಕಾಕಾರಿಗಳು ನೋಂದಣಾಕಾರಿ ಆಗಿರುತ್ತಾರೆ. ಇವರ ಬಳಿ ನೋಂದಣಿ ಮಾಡಿಸಿ, ಪ್ರಮಾಣ ಪತ್ರ ಪಡೆಯಬೇಕಾಗುತ್ತದೆ.
ರಾಜ್ಯಾದ್ಯಂತ 5,950 ಗ್ರಾಮ ಪಂಚಾಯಿತಿಗಳಿವೆ. ಎಲ್ಲಾ ಪಂಚಾಯಿತಿಗಳಲ್ಲೂಈ ಸೇವೆ ಕಲ್ಪಿಸಲಾಗುವುದು. ಜತೆಗೆ, ವಿವಾಹ ನೋಂದಣಿಯೂ ಗ್ರಾಪಂಗಳಲ್ಲೇ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ. ಗ್ರಾಪಂ ಕಾರ್ಯದರ್ಶಿಯವರನ್ನು ಉಪ ನೋಂದಣಾಕಾರಿಯನ್ನಾಗಿ ನೇಮಿಸಲಾಗಿದೆ.
ಈ ಸಂಬಂಧ ಇ-ಜನ್ಮ ತಂತ್ರಾಂಶದಲ್ಲಿ ಜನನ, ಮರಣ ನೋಂದಾಯಿಸಿ, ಪ್ರಮಾಣ ಪತ್ರಗಳನ್ನು ಡಿಜಿಟಲ್ ಸಹಿ ಮೂಲಕ ವಿತರಿಸಲು ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗಳು ಡಿಜಿಟಲ್ ಕೀಗಳನ್ನು ಹೊಂದಿರಬೇಕು. ಈ ಬಗ್ಗೆ ಹಂತಹಂತವಾಗಿ ಮಾಹಿತಿ ನೀಡುವುದರ ಜತೆಗೆ, ಸಿಬ್ಬಂದಿಗೆ ತರಬೇತಿಯನ್ನೂ ನೀಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ಧರಿಸಿದೆ.






